ADVERTISEMENT

ಕಸಾಪ ಸಮಯ ಸಾಧಕರನ್ನು ದೂರವಿಟ್ಟು, ನೈಜ ಸಾಧಕರನ್ನು ಪುರಸ್ಕರಿಸುತ್ತಿದೆ:ಮಹೇಶ ಜೋಶಿ

ಎಂ.ಕೃಷ್ಣಗೆ ‘ಎಂ.ಎಲ್. ಮಾದಯ್ಯ ದತ್ತಿ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 16:09 IST
Last Updated 3 ಜೂನ್ 2025, 16:09 IST
ಕಾರ್ಯಕ್ರಮದಲ್ಲಿ ಎಂ.ಕೃಷ್ಣ ಅವರಿಗೆ ‘ಎಂ.ಎಲ್. ಮಾದಯ್ಯ ದತ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪದ್ಮಿನಿ ನಾಗರಾಜು, ಕೆ.ಪಿ. ಪುತ್ತೂರಾಯ, ಮಹೇಶ ಜೋಶಿ, ಪಟೇಲ್‌ ಪಾಂಡು, ವೂಡೇ ಪಿ. ಕೃಷ್ಣ, ಎಸ್.ರಾಮದಾಸ್, ಎಂ.ಎಲ್. ಮಾದಯ್ಯ ಹಾಗೂ ನೇ.ಭ. ರಾಮಲಿಂಗ ಶೆಟ್ಟಿ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಎಂ.ಕೃಷ್ಣ ಅವರಿಗೆ ‘ಎಂ.ಎಲ್. ಮಾದಯ್ಯ ದತ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪದ್ಮಿನಿ ನಾಗರಾಜು, ಕೆ.ಪಿ. ಪುತ್ತೂರಾಯ, ಮಹೇಶ ಜೋಶಿ, ಪಟೇಲ್‌ ಪಾಂಡು, ವೂಡೇ ಪಿ. ಕೃಷ್ಣ, ಎಸ್.ರಾಮದಾಸ್, ಎಂ.ಎಲ್. ಮಾದಯ್ಯ ಹಾಗೂ ನೇ.ಭ. ರಾಮಲಿಂಗ ಶೆಟ್ಟಿ ಉಪಸ್ಥಿತರಿದ್ದರು   

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಸಮಯ ಸಾಧಕರನ್ನು ದೂರವಿಟ್ಟು, ನೈಜ ಸಾಧಕರನ್ನು ಪುರಸ್ಕರಿಸುತ್ತಿದೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.

ಕಸಾಪ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೋಲಾರದ ಸಿವಿಲ್ ಎಂಜಿನಿಯರ್ ಎಂ.ಕೃಷ್ಣ ಅವರಿಗೆ 2025ನೇ ಸಾಲಿನ ‘ಎಂ.ಎಲ್. ಮಾದಯ್ಯ ದತ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಜೋಶಿ, ‘ಪರಿಷತ್ತು ಸಾಹಿತ್ಯ ಕ್ಷೇತ್ರದಿಂದಾಚೆಗೂ ತನ್ನ ಸಾಂಸ್ಕೃತಿಕ ಸರಹದ್ದನ್ನು ವಿಸ್ತರಿಸಿಕೊಳ್ಳುತ್ತಿದೆ. ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದ ಸಾಧಕರಿಗೆ ನೀಡುವ ದತ್ತಿ ಪುರಸ್ಕಾರ ಅದಕ್ಕೆ ಸಾಕ್ಷಿ’ ಎಂದರು. 

‘ಸಾಧನೆಗೆ ಸವಾಲುಗಳು ಜಾಸ್ತಿ. ಟೀಕಿಸುವವರೇ ಮುಂದೆ ಸಾಧನೆಗೆ ಬೆರಗಾಗಿ, ಆರಾಧಿಸಲು ತೊಡಗುತ್ತಾರೆ. ನೈಜ ಸಾಧಕರನ್ನು ಗುರುತಿಸಿ ಗೌರವಿಸಿದಾಗ ಅದು ಬೇರೆಯವರಿಗೂ ಸಾಧನೆಗೆ ಪ್ರೇರಣೆಯಾಗಲಿದೆ’ ಎಂದು ಹೇಳಿದರು. 

ADVERTISEMENT

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ, ‘ಈ ದತ್ತಿ ಪ್ರಶಸ್ತಿ ಸ್ಥಾಪಿಸಿದ ಎಂ.ಎಲ್. ಮಾದಯ್ಯ ಅವರು ರೈತರ ಬಗ್ಗೆ ಕಾಳಜಿ ಹೊಂದಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಲಾರ ಜಿಲ್ಲೆಯಲ್ಲಿನ ನೀರಿನ ಸಮಸ್ಯೆ ಬಗ್ಗೆ ವಿವರಿಸಿದ ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ಎಸ್.ರಾಮದಾಸ್, ಪ್ರಶಸ್ತಿ ಪುರಸ್ಕೃತ ಎಂ.ಕೃಷ್ಣ ಅವರು ಜಿಲ್ಲೆಗೆ ನೀರು ಒದಗಿಸಲು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.

ಶಿಕ್ಷಣ ತಜ್ಞ ಕೆ.ಪಿ. ಪುತ್ತೂರಾಯ, ದತ್ತಿದಾನಿ ಎಂ.ಎಸ್.ಮಾದಯ್ಯ, ಕಸಾಪ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.