ಬೆಂಗಳೂರು: ಆಟೊ ಚಾಲಕಿಯರ ಸಂಖ್ಯೆ ಹೆಚ್ಚಾದರೆ, ನಗರದಲ್ಲಿ ಮಹಿಳೆಯರು ಇನ್ನಷ್ಟು ಸುರಕ್ಷಿತವಾಗಿ ಆಟೊ ಪ್ರಯಾಣ ಮಾಡಲು ಮುಂದಾಗುತ್ತಾರೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.
ಬಿ.ಪ್ಯಾಕ್ ಹಾಗೂ ಆದರ್ಶ ಆಟೊ ಸಂಘಟನೆ ಸಹಯೋಗದಲ್ಲಿ ‘ಮಹಿಳೆಯರಿಗೆ ಉಚಿತ ಆಟೊ ಚಾಲನಾ ತರಬೇತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಗರದಲ್ಲಿ ಆಟೊ ಬಳಸುವವರ ಪೈಕಿ ಮಹಿಳೆಯರೇ ಹೆಚ್ಚು. ಆದರೆ, ಕೆಲವೊಂದು ಸಂದರ್ಭದಲ್ಲಿ ಮಹಿಳೆಯರ ಮೇಲೆ ಕಿರುಕುಳದಂತಹ ಸುದ್ದಿ ಕೇಳಿಬರುತ್ತವೆ. ಮಹಿಳೆಯರೇ ಆಟೊ ಚಾಲನೆಗೆ ಇಳಿದರೆ, ಇತರೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಸುರಕ್ಷಿತವಾಗಿ ಹಾಗೂ ಧೈರ್ಯವಾಗಿ ಯಾವ ಸಂದರ್ಭದಲ್ಲಾದರೂ ಆಟೊದಲ್ಲಿ ಸಂಚಾರ ಮಾಡಲು ಮುಂದಾಗುತ್ತಾರೆ. ಹೀಗಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಟೊ ಚಾಲನಾ ವೃತ್ತಿಗೆ ಬರಬೇಕು. ಇದರಿಂದ ಸ್ತ್ರೀಯರು ಆರ್ಥಿಕವಾಗಿಯೂ ಸಬಲರಾಗುತ್ತಾರೆ ಎಂದು ಹೇಳಿದರು.
‘ಆಸಕ್ತ ಮಹಿಳೆಯರಿಗೆ ಉಚಿತವಾಗಿ ತರಬೇತಿ ನೀಡುವಂತಹ ಕೆಲಸ ಮಾಡುತ್ತಿರುವ ಬಿ.ಪ್ಯಾಕ್ ಮತ್ತು ಆದರ್ಶ ಆಟೋ ಸಂಘಟನೆ ಕೆಲಸ ಶ್ಲಾಘಿಸುವೆ, ಈ ಉಚಿತ ತರಬೇತಿ ಕಾರ್ಯಕ್ರಮವನ್ನು ಇತರೆ ಭಾಗಗಳಲ್ಲೂ ಪ್ರಾರಂಭಿಸಲಿ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿ.ಪ್ಯಾಕ್ ಸದಸ್ಯರಾದ ಮಿಮಿ ಪಾರ್ಥಸಾರಥಿ, ಅನಿಶಾ ಭಂಡಾರಿ, ಸಂಪತ್ ಸಿ, ರಾಘವೇಂದ್ರ ಪೂಜಾರಿ, ದೇವಿಕಾ ರಾಜ್ ಹಾಗೂ ತರಬೇತಿದಾರರದ ಪ್ರಭಾವತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.