ADVERTISEMENT

ಹೆಸರಘಟ್ಟ: ಚಿಣ್ಣರನ್ನು ಗ್ರಂಥಾಲಯಕ್ಕೆ ಕರೆತಂದ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 2:30 IST
Last Updated 29 ನವೆಂಬರ್ 2020, 2:30 IST
ಶಾಲಾ ಮಕ್ಕಳಿಗೆ ಪುಸ್ತಕಗಳ ಮಹತ್ವ ವಿವರಿಸುತ್ತಿರುವ ಅಭಿವೃದ್ದಿ ಅಧಿಕಾರಿ ನಾರಾಯಣಸ್ವಾಮಿ
ಶಾಲಾ ಮಕ್ಕಳಿಗೆ ಪುಸ್ತಕಗಳ ಮಹತ್ವ ವಿವರಿಸುತ್ತಿರುವ ಅಭಿವೃದ್ದಿ ಅಧಿಕಾರಿ ನಾರಾಯಣಸ್ವಾಮಿ   

ಹೆಸರಘಟ್ಟ: ಪುಟಾಣಿಗಳು ಕೈನಲ್ಲಿ ಪುಸ್ತಕ ಹಿಡಿದು ಚಂದಮಾಮ, ಪಂಚತಂತ್ರ ಕಥೆಗಳನ್ನು ಓದಿದರು. ಕುವೆಂಪು, ಬೇಂದ್ರೆ, ಕಾರಂತರ ಪುಸ್ತಕಗಳ ಮೇಲೆ ಬೆರಳಾಡಿಸಿ ಧನ್ಯತೆ ಮೆರೆದರು...

ಈ ಚಿತ್ರಣ ಕಂಡದ್ದು ಹುರುಳಿಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐವರಕಂಡಪುರ ಗ್ರಾಮದ ಗ್ರಂಥಾಲಯದಲ್ಲಿ. ಸಂವಿಧಾನ ಸರ್ಮಪಣೆ ದಿನದ ಅಂಗವಾಗಿ ಗ್ರಾಮದ ಮನೆ ಮನೆಗಳಿಗೆ ತೆರಳಿದಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಾರಾಯಣಸ್ವಾಮಿ, ಮಕ್ಕಳನ್ನು ಗ್ರಂಥಾಲಯಕ್ಕೆ ಕರೆ ತಂದರು. ಪೋಷಕರಿಗೆ, ಶಾಲಾ ಮಕ್ಕಳಿಗೆ ಪುಸ್ತಕಗಳು ಮತ್ತು ಜ್ಞಾನದ ಮಹತ್ವದ ಬಗ್ಗೆ ಅರಿವು ಮೂಡಿಸಿದರು.

‘ಮಕ್ಕಳ ಕೈಗೆ ಮೊಬೈಲ್ ದೂರವಾಣಿ ಬದಲಿಗೆ ಪುಸ್ತಕಗಳನ್ನು ಕೊಡಿ. ಪುಸ್ತಕಓದುವ ಹವ್ಯಾಸವನ್ನು ಮಕ್ಕಳಿಗೆ ಬೆಳೆಸಿದರೆ ಅವರ ಮನೋವಿಕಾಸಗೊಳ್ಳುತ್ತದೆ, ಸಕಾರಾತ್ಮಕ ಚಿಂತನೆಗಳು ಮೂಡತ್ತವೆ. ಈ ಸಮಾಜಕ್ಕೆ ಒಳಿತು ಮಾಡುವ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯುತ್ತಾರೆ’ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ADVERTISEMENT

‘ಪ್ರತಿ ದಿನ ಎರಡು ಗಂಟೆ ಗ್ರಂಥಾಲಯದಲ್ಲಿ ಕುಳಿತು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಈ ಗ್ರಂಥಾಲಯದಲ್ಲಿ 13 ಸಾವಿರ ಪುಸ್ತಕಗಳಿವೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಬೇಕಿರುವ ಎಲ್ಲಾ ಪುಸ್ತಕಗಳು ಇಲ್ಲಿವೆ’ ಎಂದು ತಿಳಿಸಿದರು.

ಗ್ರಂಥಾಲಯ ಮುಖ್ಯಸ್ಥ ಮಂಜುನಾಥ್ ಮಾತನಾಡಿ, ‘ಪ್ರತಿದಿನ ಗ್ರಂಥಾಲಯಕ್ಕೆ ಬಂದು ಓದುವ ಅಭ್ಯಾಸ ರೂಢಿಸಿಕೊಳ್ಳಿ. ಪುಸ್ತಕಗಳ ಜತೆ ಕಳೆದ ಸಮಯ ಎಂದಿಗೂ ವ್ಯರ್ಥವಾಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.