ADVERTISEMENT

ದೇಶದಲ್ಲಿ ಹಾಲಿನ ಉತ್ಪಾದನೆ ಪ್ರಮಾಣ ಕಡಿಮೆ: ಅಮರೇಶ ಚಂದ್ರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 14:28 IST
Last Updated 2 ಡಿಸೆಂಬರ್ 2023, 14:28 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ವಿಶ್ವದ ಸರಾಸರಿ ಹಾಲು ಉತ್ಪಾದನೆಗೆ ಹೋಲಿಸಿದರೆ ಭಾರತದ ಸರಾಸರಿ ಹಾಲಿನ ಉತ್ಪಾದನೆ ಪ್ರಮಾಣ ಕಡಿಮೆ ಇದೆ’ ಎಂದು ಭಾರತೀಯ ಹುಲ್ಲುಗಾವಲು, ಮೇವು ಸಂಶೋಧನಾ ಸಂಸ್ಥೆಯ ನಿರ್ದೇಶಕ ಅಮರೇಶ ಚಂದ್ರ ಹೇಳಿದರು.

ನಗರದ ಜಿಕೆವಿಕೆ ಆವರಣದಲ್ಲಿ ಶನಿವಾರ ನಡೆದ ‘ಸುಸ್ಥಿರ ಪರಿಸರ ಸ್ನೇಹಿ ಹುಲ್ಲುಗಾವಲು, ಮೇವು ಮತ್ತು ಪ್ರಾಣಿ ವಿಜ್ಞಾನ ನಾವೀನ್ಯತೆಯಿಂದ ಭವಿಷ್ಯದ ಘೋಷಣೆ’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ದೇಶದಲ್ಲಿ ಉತ್ಕೃಷ್ಟ ಮೇವು, ರಸಮೇವು, ಪಶು ಆಹಾರ ಹಾಗೂ ಆಧುನಿಕ ತಾಂತ್ರಿಕತೆಗಳ ಕೊರತೆಯಿಂದ ಹಾಲಿನ ಉತ್ಪಾದನೆಯ ಪ್ರಮಾಣ ಕುಸಿದಿದೆ. ಪ್ರಸ್ತುತ ದೇಶದಾದ್ಯಂತ 20 ದಶಲಕ್ಷ ಹೆಕ್ಟೇರ್ ಹುಲ್ಲುಗಾವಲು ಇದ್ದರೂ ಶೇ 12ರಷ್ಟು ಹಸಿಮೇವು, ಶೇ 23ರಷ್ಟು ಒಣಮೇವು ಹಾಗೂ ಶೇ 24ರಷ್ಟು ಪಶು ಆಹಾರದ ಕೊರತೆ ಇದೆ. ಆದ್ದರಿಂದ, ಸರಾಸರಿ ಹಾಲಿನ ಉತ್ಪಾದನೆ ಹೆಚ್ಚಿಸಲು ಉತ್ತಮ ತಳಿಗಳ ಆಯ್ಕೆ, ಆಧುನಿಕ ತಂತ್ರಜ್ಞಾನ ಅಳವಡಿಕೆ ಹಾಗೂ ಪ್ರತಿಯೊಬ್ಬ ರೈತ ತನ್ನ ಜಮೀನಿನಲ್ಲಿ ಶೇ 10ರಷ್ಟು ಜಾಗವನ್ನು ಹುಲ್ಲುಗಾವಲಿಗೆ ಮೀಸಲಿಟ್ಟರೆ ಮೇವಿನ ಕೊರತೆ ನೀಗಿಸಬಹುದು’ ಎಂದು ತಿಳಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ, ‘ದೇಶದಲ್ಲಿ ಹೈನೋದ್ಯಮ ಹುಲ್ಲುಗಾವಲು, ಮೇವಿನ ಬೇಸಾಯದ ಬೆಳೆಗಳು ಮೇಲೆ ಅವಲಂಬಿಸಿದೆ. ರೈತರು ಸಾಂದ್ರೀಕರಿಸಿದ ಪಶು ಆಹಾರದ ಮೇಲೆ ಅವಲಂಬಿಸಿರುವುದಕ್ಕೆ ಹೈನೋದ್ಯಮ ಲಾಭದಾಯಕವಾಗಿಲ್ಲ. ಇದರ ಖರ್ಚು ಮತ್ತು ವೆಚ್ಚಗಳನ್ನು ಕಡಿಮೆ ಮಾಡಬೇಕಾದರೆ ಪೌಷ್ಠಿಕ ಮೇವು ಪಶುಗಳಿಗೆ ನೀಡಬೇಕು. ರಾಜ್ಯದಲ್ಲಿ ಸದ್ಯ ಬರ ಇದ್ದು, ಮುಂದಿನ ದಿನಗಳಲ್ಲಿ ಮೇವಿನ ಸಮಸ್ಯೆ ಎದುರಾಗಬಹುದು’ ಎಂದು ಹೇಳಿದರು.

ಕರ್ನಾಟಕ ಪಶು ವೈದ್ಯಕೀಯ, ಬೀದರ್‌ನ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ. ವೀರಣ್ಣ, ನಬಾರ್ಡ್‌ ಪ್ರಧಾನ ವ್ಯವಸ್ಥಾಪ ಪಿ. ದಿನೇಶ್, ಮಥುರಾ ಸಂಸ್ಕೃತಿ ವಿಶ್ವವಿದ್ಯಾಲಯದ ಕುಲಪತಿ ಎಂ.ಬಿ. ಚೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.