ADVERTISEMENT

ಕಲೆಯೂ ಉದ್ಯಮವಾಗುವ ಕಾಲ ದೂರವಿಲ್ಲ

ಸಾಂಸ್ಕೃತಿಕ ಸಮಾವೇಶ ಉದ್ಘಾಟಿಸಿದ ಬರಗೂರು ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 18:59 IST
Last Updated 3 ನವೆಂಬರ್ 2025, 18:59 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ಬೆಂಗಳೂರು: ಚಲನಚಿತ್ರ, ಮಾಧ್ಯಮ ಸೇರಿದಂತೆ ಹಲವು ಕ್ಷೇತ್ರಗಳು ಉದ್ಯಮವಾಗಿ ಬದಲಾಗುತ್ತಿವೆ. ಕಲಾಪ್ರಕಾರಗಳು ಇನ್ನೂ ಉದ್ಯಮಗಳಾಗಿ ಬದಲಾಗಿಲ್ಲ. ಆದರೆ ವಾಣಿಜ್ಯೀಕರಣಗೊಂಡ ಸಮಾಜದಲ್ಲಿ ಉದ್ಯಮವೇ ಪ್ರಧಾನವಾಗಿದ್ದು, ಕಲೆಯು ಕೂಡ ಉದ್ಯಮವಾಗಿ ಬದಲಾಗುವ ಕಾಲ ದೂರವಿಲ್ಲ ಎಂದು ಲೇಖಕ ಬರಗೂರು ರಾಮಚಂದ್ರಪ್ಪ ಹೇಳಿದರು.

ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ನಗರದದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಣಿಜ್ಯೀಕರಣದ ಭಾಗವಾಗಿ ಮುಂದಿನ ದಿನಗಳಲ್ಲಿ ಕಲೆಗೆ ಬಿಕ್ಕಟ್ಟು ಎದುರಾಗಲಿದೆ. ಉದ್ಯಮಗಳಲ್ಲಿ ಸಂಪಾದನೆ ಮುಖ್ಯ. ಆದರೆ, ಕಲಾವಿದರಿಗೆ ಸಂಪಾದನೆ ಜೊತೆಗೆ ಸಂವೇದನೆಯೂ ಇರಬೇಕಾಗುತ್ತದೆ. ಎರಡನ್ನೂ ಸಮತೋಲನದಿಂದ ಕಾಪಾಡಿಕೊಳ್ಳಬೇಕಾಗುತ್ತದೆ ಎಂದು ವಿಶ್ಲೇಷಿಸಿದರು.

ADVERTISEMENT

ನೃತ್ಯ ಗುರು  ಶ್ರೀಧರ್ ಮಾತನಾಡಿ, ‘ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕಲಾಪ್ರಕಾರಗಳು ನಶಿಸಿ ಹೋಗುತ್ತಿವೆ. ಕಲಾವಿದರು ಸಂಭಾವನೆ ಇಲ್ಲದೇ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ ಮಾತನಾಡಿ, ‘ಶಾಸ್ತ್ರೀಯ ಸಂಗೀತ, ನೃತ್ಯ ಪ್ರಕಾರಗಳಲ್ಲಿ ಸಾಧನೆಗೈದ ಸಾಧಕರು ಕೇವಲ ಕಲಾ ಸಮುದಾಯದಲ್ಲಿ ಮಾತ್ರ ಗುರುತಿಸಿಕೊಳ್ಳುತ್ತಾರೆ. ಇದರಿಂದ ಆಚೆಗೆ ಬಂದರೆ ಜಗತ್ತಿಗೆ ಅವರು ಯಾರು ಎಂಬುದು ಗೊತ್ತಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಎನ್. ನರೇಂದ್ರಬಾಬು, ಕಲಾವಿದೆ ಉಷಾ ಬಸಪ್ಪ, ಜನಪದ ವಿದ್ವಾಂಸ ಜೋಗಿಲ ಸಿದ್ದರಾಜು ಭಾಗವಹಿಸಿದ್ದರು. ಚಿರಂಜೀವಿ ಅಚ್ಯುತ್ ಜಗದೀಶ್ ತಂಡದಿಂದ ವೀಣಾ ವಾದನ ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.