
ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ರಂಗಕರ್ಮಿ ಎಚ್. ಜನಾರ್ದನ (ಜನ್ನಿ) ಮಾತನಾಡಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಅನಕ್ಷರಸ್ಥರನ್ನು ಬುದ್ಧಿಗೇಡಿಗಳೆಂದು ಕರೆಯುವವರೇ ಬುದ್ಧಿಗೇಡಿಗಳು. ಅಕ್ಷರ ಜ್ಞಾನ ಇಲ್ಲದ ಜನರೇ ಹೆಚ್ಚು ಜ್ಞಾನಿಗಳಾಗಿರುತ್ತಾರೆ. ಅವರಿಗಿಂತ ದೊಡ್ಡ ಸೃಜನಶೀಲರು ಬೇರೆ ಎಲ್ಲೂ ಇಲ್ಲ’ ಎಂದು ರಂಗಕರ್ಮಿ ಎಚ್. ಜನಾರ್ದನ್ (ಜನ್ನಿ) ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅವರಿಗಿರುವ ಬುದ್ಧಿವಂತಿಕೆ, ಎಲ್ಲರನ್ನು ಒಳಗೊಳ್ಳುವ ಗುಣ ನಮ್ಮಲ್ಲಿ ಇಲ್ಲ. ಬೇಕಿದ್ದರೆ ಮಹದೇಶ್ವರ ಬೆಟ್ಟಕ್ಕೆ ಒಂದು ಬಾರಿ ಹೋಗಿ ಬನ್ನಿ. ಅಲ್ಲಿ 50 ಲಕ್ಷ ಜನರು ಸೇರುತ್ತಾರೆ. ಭಾಷೆ ಬೇರೆಯಾಗಿರುತ್ತದೆ. ಭಾಷೆ ಒಂದೇ ಇದ್ದರೆ ಧ್ವನಿ ಬೇರೆಯಾಗಿರುತ್ತದೆ. ಅಲ್ಲಿ 25 ಲಕ್ಷ ವೈವಿಧ್ಯ ಕಾಣಬಹುದು. ಆದರೆ, ಅವರೆಲ್ಲರೂ ಮಹದೇಶ್ವರನ ಹೆಸರಲ್ಲಿ ಒಂದಾಗುತ್ತಾರೆ. ಹಾಡು ಕಟ್ಟುತ್ತಾರೆ. ಸಂವಹನ ನಡೆಸುತ್ತಾರೆ. ಒಳಗೊಳ್ಳುವಿಕೆ ಅಲ್ಲಿ ಕಾಣಬಹುದು’ ಎಂದು ವಿವರಿಸಿದರು.
‘ನಾವು ಅಡ್ಡದಾರಿ ಹಿಡಿಯುತ್ತೇವೆ. ಒಳಗೊಳ್ಳುವುದಿಲ್ಲ. ಮನುಷ್ಯ ಸಂಬಂಧಗಳನ್ನು ಬೆಳೆಸುವುದಿಲ್ಲ. ಮನುಷ್ಯ ಸಂಬಂಧ ಕಟ್ಟಲಾಗದೇ ದೇಶ ಕಟ್ಟುತ್ತೇವೆ ಎಂಬುದಕ್ಕೆ ಅರ್ಥವೇ ಇರುವುದಿಲ್ಲ’ ಎಂದರು.
‘ಅಕ್ಷರಸ್ಥರಾದ ನಾವು ಇಷ್ಟು ಉದ್ದದ ಹಾಡು ಎಂದು ಬರೆಯುತ್ತೇವೆ. 20 ಗೆರೆ ಇದ್ದರೆ ಅಷ್ಟನ್ನೇ ಓದುತ್ತೇವೆ. ಅಷ್ಟನ್ನೇ ಹಾಡುತ್ತೇವೆ. ಆದರೆ, ಜನಪದರು ನೋಡುತ್ತ ನೋಡುತ್ತಲೇ ಕಾವ್ಯ ಕಟ್ಟುತ್ತಾರೆ’ ಎಂದು ತಿಳಿಸಿದರು.
‘ರಾಷ್ಟ್ರೀಯ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆದವರಷ್ಟೇ ಕಲಾವಿದರು ಎಂದು ಭಾವಿಸುವುದು ಇದೆ. ಈ ಜನಪದ ಹಾಡುಗಾರರು, ಜನಪದ ಕಲಾವಿದರು ಯಾವ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ? ಜನಪದರದ್ದೇ ನಿಜವಾದ ಶ್ರೀಮಂತ ಸಂಸ್ಕೃತಿ’ ಎಂದು ಬಣ್ಣಿಸಿದರು.
‘ಕವಿ ಸಿದ್ದಲಿಂಗಯ್ಯ ಅವರ ಶೇ 90ರಷ್ಟು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದವನು ನಾನು. ಒಂದು ಬಾರಿ ಅವರು ಓದುತ್ತಾರೆ. ಅದಕ್ಕೆ ಸರಿಯಾಗಿ ಅಲ್ಲೇ ರಾಗ ಸಂಯೋಜಿಸುತ್ತೇನೆ. ಒಂದೇ ಬಾರಿಗೆ ಅವರ ಕವಿತೆ ಹಾಡು ಆಗಿ ಬಿಡುತ್ತದೆ. ಎರಡನೇ ಬಾರಿಗೆ ರಾಗ ಸಂಯೋಜಿಸಿದ್ದೇ ಇಲ್ಲ’ ಎಂದು ಅನುಭವ ಬಿಚ್ಚಿಟ್ಟರು.
‘ಈಗ ಕಾಡು, ನೀರು ಮಾರಾಟಗಾರರಿದ್ದಾರೆಯೇ ಹೊರತು, ನಿಸರ್ಗವನ್ನು ಅರ್ಥ ಮಾಡಿಕೊಳ್ಳುವವರಿಲ್ಲ. ಅದುವೇ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಅದುವೇ ಸಮಾಜಘಾತುಕವಾದುದು. ಪ್ರಕೃತಿಯನ್ನು ಅರ್ಥ ಮಾಡಿಕೊಂಡವರಿಂದ ಪರಿಸರ ನಾಶ ಸಾಧ್ಯವಿಲ್ಲ’ ಎಂದು ಹೇಳಿದರು.
‘ಕಾರಂತ, ಸಿದ್ದಲಿಂಗಯ್ಯ ಮುಂತಾದವರು ತಾಯಿ ಹೃದಯದವರು. ಅವರು ನಮಗೆ ಗೊತ್ತಿಲ್ಲದಂತೆ ನಮ್ಮನ್ನು ರಕ್ಷಿಸುತ್ತಾ ಹೋದವರು. ಸಾಮೂಹಿಕ ಚಿಂತನೆ, ಸಮಷ್ಠಿ ಚಿಂತನೆಗಳನ್ನು ಕಲಿಸಿದವರು’ ಎಂದು ನೆನಪು ಮಾಡಿಕೊಂಡರು.
‘ನನ್ನ ಬಾಲ್ಯ ಕೊಳೆಗೇರಿಯಲ್ಲಿ ನರಳಿ ಅರಳಿತು. ಮನೆಯಲ್ಲಿ ಕಿತ್ತುತಿನ್ನುವ ಬಡತನವಿತ್ತು. ತುತ್ತು ಅನ್ನಕ್ಕಾಗಿ ಬಾವಿಯಲ್ಲಿ ನೀರು ಸೇದಬೇಕಿತ್ತು. ಪುಟ್ಟ ಕೈಗಳಲ್ಲಿ ನೀರು ಸೇದಿ ಬೊಬ್ಬೆಗಳು ಬಂದಿದ್ದವು’ ಎಂದು ಜನ್ನಿ ಬಾಲ್ಯದ ದಿನಗಳನ್ನು ಕಣ್ಣಲ್ಲಿ ನೀರು ತುಂಬಿಸಿಕೊಂಡು ನೆನಪು ಮಾಡಿಕೊಂಡರು. ‘ಶ್ರೀರಾಂಪುರದ ಕೊಳೆಗೇರಿಯಲ್ಲಿ ನಾನು ಮಾತ್ರವಲ್ಲ ಕವಿ ಸಿದ್ದಲಿಂಗಯ್ಯ ಕೂಡ ಅಲ್ಲೇ ಬೆಳೆದವರು. ಗುಡಿಸಲೇ ನಮ್ಮ ಬದುಕು ರೂಪಿಸಿದೆ. ಹಾಸ್ಟೆಲ್ ಸೇರಿದರೆ ಹೊಟ್ಟೆ ತುಂಬುತ್ತದೆ ಎಂಬ ಕಾರಣಕ್ಕೆ ವೈಟ್‌ಫೀಲ್ಡ್‌ನಲ್ಲಿ ಹಾಸ್ಟೆಲ್‌ಗೆ ಸೇರಿದ್ದೆ. ಅಲ್ಲಿ 15 ಎಕರೆ ಮಾವು ತೆಂಗು ಬಾಳೆ ತೋಟಗಳಿದ್ದವು. ಬೆಳಿಗ್ಗೆ 5ಕ್ಕೆ ಎಬ್ಬಿಸಿ ನೀರು ಹಾಕಲು ಕಳುಹಿಸುತ್ತಿದ್ದರು’ ಎಂದು ಹೇಳಿದರು. ‘ಸಿದ್ದಲಿಂಗಯ್ಯ ಅವರ ಕಾರಣದಿಂದಾಗಿಯೇ ಕಾರಂತರು ಕಿ.ರಂ. ನಾಗರಾಜ್ ಪ್ರಸನ್ನ ಇಂಥ ಅನೇಕರ ಸಂಪರ್ಕಕ್ಕೆ ಬರಲು ಸಾಧ್ಯವಾಯಿತು’ ಎಂದು ನೆನಪು ಮಾಡಿಕೊಂಡರು. ‘ಸಮುದಾಯ’ದಲ್ಲಿ ಮಾಡಿದ ಪ್ರಯೋಗ ನರಗುಂದ ರೈತರ ಹತ್ಯೆ ನಡೆಸಿದ ಹೋರಾಟಗಳನ್ನು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.