ADVERTISEMENT

ಕಳ್ಳತನ ತಡೆಗೆ ‘ನೆರೆ–ಹೊರೆ ಕಾವಲು ಸಮಿತಿ’ ರಚನೆ

342 ಪ್ರಕರಣ: 229 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 19:55 IST
Last Updated 1 ಅಕ್ಟೋಬರ್ 2019, 19:55 IST
‘ನೆರೆ–ಹೊರೆ ಕಾವಲು ಸಮಿತಿ’ ಕಾರ್ಯಚಟುವಟಿಕೆಗಳಿಗೆ ಮಂಗಳವಾರ ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್ ಚಾಲನೆ ನೀಡಿದರು. ಸಮಿತಿ ಸದಸ್ಯರು ಇದ್ದರು
‘ನೆರೆ–ಹೊರೆ ಕಾವಲು ಸಮಿತಿ’ ಕಾರ್ಯಚಟುವಟಿಕೆಗಳಿಗೆ ಮಂಗಳವಾರ ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್ ಚಾಲನೆ ನೀಡಿದರು. ಸಮಿತಿ ಸದಸ್ಯರು ಇದ್ದರು   

ಬೆಂಗಳೂರು: ಮನೆಯಲ್ಲಿ ನಡೆಯುತ್ತಿದ್ದ ಕಳ್ಳತನಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ದಕ್ಷಿಣ ವಿಭಾಗದ ಪೊಲೀಸರು, ಸಾರ್ವಜನಿಕರ ಸಹಭಾಗಿತ್ವದಲ್ಲಿ ‘ನೆರೆಹೊರೆ ಕಾವಲು ಸಮಿತಿ’ ರಚಿಸಿದ್ದಾರೆ.

ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯ ಚಟುವಟಿಕೆಗಳಿಗೆ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಚಾಲನೆ ನೀಡಿದರು.

‘ಮನೆಯಲ್ಲಿ ಯಾರೂ ಇಲ್ಲದಿದ್ದನ್ನು ಖಾತ್ರಿಪಡಿಸಿಕೊಂಡೇ ದುಷ್ಕರ್ಮಿಗಳು ಕಳ್ಳತನ ಎಸಗುತ್ತಿದ್ದಾರೆ. ಇಂಥ ಪ್ರಕರಣದಲ್ಲಿ ಪಕ್ಕದ ಮನೆಯವರಿಗೂ ಕಳ್ಳತನ ನಡೆದ ಬಗ್ಗೆ ಯಾವುದೇ ಸುಳಿವು ಇರುವುದಿಲ್ಲ. ಕಾರಣ, ಅಕ್ಕಪಕ್ಕದವರ ನಡುವೆ ಸಮನ್ವಯ ಕೊರತೆ ಇದೆ. ಇದನ್ನು ನಿವಾರಿಸಿ ಕಳ್ಳತನ ತಡೆಯಲು ಈ ಸಮಿತಿ ರಚಿಸಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸೆಪಟ್‌ ಹೇಳಿದರು.

ADVERTISEMENT

‘ವಿಭಾಗದ ಪ್ರತಿ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲೂ ಸಮಿತಿ ರಚಿಸಲಾಗುವುದು. ಸ್ಥಳೀಯ ನಿವಾಸಿಗಳೇ ಸದಸ್ಯರಾಗಿರುತ್ತಾರೆ. ಮನೆ ಬಿಟ್ಟು ಪರ ಊರಿಗೆ ಹೋಗುವಾಗ, ಆ ಮಾಹಿತಿಯನ್ನು ಸಮಿತಿಯವರಿಗೆ ತಿಳಿಸಬೇಕು. ಯಾರೂ ಇಲ್ಲದಿದ್ದಾಗ ಸಮಿತಿಯ ಸದಸ್ಯರೇ ಮನೆಗಳ ಬಗ್ಗೆ ನಿಗಾ ವಹಿಸಲಿದ್ದಾರೆ’ ಎಂದರು.

342 ಪ್ರಕರಣ ಭೇದಿಸಿ 229 ಬಂಧನ: ದಕ್ಷಿಣ ವಿಭಾಗ ವ್ಯಾಪ್ತಿಯ ಪೊಲೀಸರು ಎರಡು ತಿಂಗಳ ಅವಧಿಯಲ್ಲಿ 342 ಅಪರಾಧ ಪ್ರಕರಣಗಳನ್ನು ಭೇದಿಸಿದ್ದು, 229 ಮಂದಿಯನ್ನು ಬಂಧಿಸಿದ್ದಾರೆ.

‘ವಾಹನ ಕಳವು, ಮನೆಯಲ್ಲಿ ಕಳವು ಹಾಗೂ ಸುಲಿಗೆ ಪ್ರಕರಣ ಸಂಬಂಧ ದೂರುಗಳು ದಾಖಲಾಗಿದ್ದವು. ದಕ್ಷಿಣ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ’ ಎಂದು ಭಾಸ್ಕರ್ ರಾವ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘8.7 ಕೆ.ಜಿ ಚಿನ್ನಾಭರಣ ಹಾಗೂ 25.5 ಕೆ.ಜಿ ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ. 155 ದ್ವಿಚಕ್ರ ವಾಹನ, 27 ಮೂರು ಚಕ್ರ ವಾಹನ, 10 ಕಾರುಗಳು, 122 ಮೊಬೈಲ್ ಹಾಗೂ 54 ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.