ADVERTISEMENT

ಕೆಲಸಕ್ಕಿದ್ದ ಮನೆಯಲ್ಲೇ ಕಳವು: ನೇಪಾಳದ ದಂಪತಿ ಬಂಧನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 18:51 IST
Last Updated 10 ಫೆಬ್ರುವರಿ 2021, 18:51 IST
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ – ಪ್ರಜಾವಾಣಿ ಚಿತ್ರ
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿ ಪರಾರಿಯಾಗಿದ್ದ ನೇಪಾಳದ ದಂಪತಿ ಸೇರಿ ಏಳು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

‘ನೇಪಾಳದ ಪ್ರೇಮ್ ಬಹುದ್ದೂರ್ ಬಿಸ್ವಾ, ಅವರ ಪತ್ನಿ ಧನ ಬಿಸ್ವಾ, ಟೀಕಾ ರಾಮ್ ಬಿಸ್ಪಾ ಅಲಿಯಾಸ್ ಟೀಕು, ಜನಕ್ ಕುಮಾರ್, ಕಮಲ್ ಜಾಜೋ ವಿಶ್ವಕರ್ಮ, ಜನಕ್ ಜೈಶಿ ಹಾಗೂ ಸುನೀಲ್ ಬಹದ್ದೂರ್ ಶಾಹಿ ಬಂಧಿತರು. ಅವರಿಂದ ₹ 2 ಲಕ್ಷ ನಗದು ಹಾಗೂ ₹ 60.10 ಲಕ್ಷ ಮೌಲ್ಯದ ಚಿನ್ನಾಭರಣ, ವಜ್ರದ ಆಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಪ್ರೇಮ್ ಬಹದ್ದೂರ್ ಬಿಸ್ವಾ ದಂಪತಿ, ಕೆಲ ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಕೋರಮಂಗಲದ 6ನೇ ಹಂತದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ಮದನ್ ಮೋಹನ್ ರೆಡ್ಡಿ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಕಳೆದ ತಿಂಗಳು ಮದನ್ ಮೋಹನ್ ರೆಡ್ಡಿ ದಂಪತಿ, ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ತೋಟದ ಮನೆಗೆ ಹೋಗಿದ್ದರು. ಅವರ ಪುತ್ರಿ ಮಾತ್ರ ಮನೆಯಲ್ಲಿದ್ದಳು.’

ADVERTISEMENT

’ಇತರೆ ಆರೋಪಿಗಳನ್ನು ಮನೆಗೆ ಕರೆಸಿಕೊಂಡಿದ್ದ ದಂಪತಿ, ಉದ್ಯಮಿಯ ಪುತ್ರಿಯನ್ನು ಬೆದರಿಸಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು’ ಎಂದೂ ತಿಳಿಸಿದರು.

ನೇಪಾಳದ ಗಡಿಯಲ್ಲಿ ಬಂಧನ

‘ನಗರದಿಂದ ಪರಾರಿಯಾಗಿದ್ದ ದಂಪತಿ, ನೇಪಾಳದ ಗಡಿಯಲ್ಲಿ ವಾಸವಿದ್ದರು. ಪ್ರಕರಣದ ತನಿಖೆ ಕೈಗೊಂಡಿದ್ದ ತಂಡ, ನೇಪಾಳಕ್ಕೆ ಹೋಗಿ ದಂಪತಿಯನ್ನು ಬಂಧಿಸಿತ್ತು. ನಂತರ, ಉಳಿದ ಆರೋಪಿಗಳನ್ನು ಬೆಂಗಳೂರು ಹಾಗೂ ಮಹಾರಾಷ್ಟ್ರದಲ್ಲಿ ಸೆರೆಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.