ADVERTISEMENT

ಪೊಲೀಸ್ ಮನೆಯಲ್ಲೇ ಕಳ್ಳತನ!

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 19:55 IST
Last Updated 30 ಡಿಸೆಂಬರ್ 2018, 19:55 IST

ಬೆಂಗಳೂರು: ಬಾಗಿಲು ಮುರಿದು ಹೆಡ್‌ಕಾನ್‌ಸ್ಟೆಬಲ್‌ ಮನೆಗೇ ನುಗ್ಗಿದ ಕಳ್ಳರು, 40 ಸಾವಿರ ನಗದು ಹಾಗೂ ₹ 7 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಈ ಸಂಬಂಧ ಹೆಬ್ಬಾಳ ಸಂಚಾರ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ವೆಂಕಟೇಶ್ ಅವರು ಶೇಷಾದ್ರಿ‍ಪುರ ಠಾಣೆಗೆ ದೂರು ಕೊಟ್ಟಿದ್ದಾರೆ. ‘ಆನಂದರಾವ್ ವೃತ್ತದ ಬಳಿ ಇರುವ ಪೊಲೀಸ್ ವಸತಿ ಸಮುಚ್ಚಯದ ಮನೆಯೊಂದರಲ್ಲಿ ನಾನು, ಪತ್ನಿ ಹಾಗೂ ಭಾಮೈದ ನೆಲೆಸಿದ್ದೇವೆ. ಶುಕ್ರವಾರ ಬೆಳಿಗ್ಗೆ 7 ಗಂಟೆಗೇ ನಾನು ಠಾಣೆಗೆ ತೆರಳಿದ್ದೆ. ಪತ್ನಿ ಸಂಬಂಧಿಕರ ಭೇಟಿಗೆಂದು ಮಂಡ್ಯಕ್ಕೆ ಹೋಗಿದ್ದಳು. ಭಾಮೈದನೂ ಕೆಲಸಕ್ಕೆ ಹೋಗಿದ್ದ’ ಎಂದು ವೆಂಕಟೇಶ್ ದೂರಿನಲ್ಲಿ ಹೇಳಿದ್ದಾರೆ.

ಅಪಘಾತ; ವಕೀಲ, ಆಟೊ ಚಾಲಕ ಸಾವು

ADVERTISEMENT

ಬೆಂಗಳೂರು: ಕೊಡಿಗೇಹಳ್ಳಿ ಜಂಕ್ಷನ್‌ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಮನೋಹರ್ (39) ಎಂಬುವರು ಮೃತಪಟ್ಟಿದ್ದರೆ, ಯಲಹಂಕದ ಬೆಳ್ಳಳ್ಳಿ ಬಳಿ ರಸ್ತೆ ವಿಭಜಕಕ್ಕೆ ಆಟೊ ಡಿಕ್ಕಿಯಾಗಿ ಚಾಲಕ ವಸೀಂ (30) ಕೊನೆಯುಸಿರೆಳೆದಿದ್ದಾರೆ.

ಚಿಕ್ಕಬಳ್ಳಾಪುರದ ಮನೋಹರ್, ಪತ್ನಿ–ಮಕ್ಕಳ ಜತೆ ಯಲಹಂಕ ಸಮೀಪದ ಮಾರುತಿನಗರದಲ್ಲಿ ನೆಲೆಸಿದ್ದರು. ವಕೀಲ ವೃತ್ತಿಯ ಜತೆಗೆ ರಿಯಲ್ ಎಸ್ಟೇಟ್ ವ್ಯವಹಾರವನ್ನೂ ಮಾಡುತ್ತಿದ್ದ ಅವರು, ಕೊಡಿಗೇಹಳ್ಳಿ ಜಂಕ್ಷನ್ ಬಳಿ ಕಚೇರಿ ಹೊಂದಿದ್ದರು.

ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಕಚೇರಿ ಬಂದ್ ಮಾಡಿ, ಮನೆಗೆ ತೆರಳಲು ಆಟೊ ನಿಲ್ದಾಣದ ಕಡೆಗೆ ಹೋಗುತ್ತಿದ್ದರು. ಈ ವೇಳೆ ಯಲಹಂಕ ಕಡೆಗೆ ಹೋಗುತ್ತಿದ್ದ ಕಾರು ಅವರಿಗೆ ಗುದ್ದಿತು. ಕೆಳಗೆ ಬಿದ್ದಾಗ ಮೈಮೇಲೆ ಚಕ್ರ ಹರಿದಿದ್ದರಿಂದ ಸ್ಥಳದಲ್ಲೇ ಪ್ರಾಣಬಿಟ್ಟರು. ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದರು.

ಇನ್ನೊಂದು ಪ್ರಕರಣ: ಬೆಳ್ಳಳ್ಳಿ ಬಳಿಯ ಅಪಘಾತದಲ್ಲಿ ಮೃತಪಟ್ಟ ಆಟೊ ಚಾಲಕ ವಸೀಂ, ಕೋಲಾರದವರು. ಎರಡು ವರ್ಷಗಳ ಹಿಂದೆ ಬೆಳ್ಳಳ್ಳಿಯ ಯುವತಿಯನ್ನು ಮದುವೆ ಆಗಿ, ಮಾವ‌ನ ಮನೆಯಲ್ಲೇ ಉಳಿದುಕೊಂಡಿದ್ದರು. ಶನಿವಾರ ರಾತ್ರಿ 10.30ರ ಸುಮಾರಿಗೆ ಆಟೊದಲ್ಲಿ ಮನೆಗೆ ಮರಳುವಾಗ ಮೇಲ್ಸೇತುವೆ ಬಳಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದ ಅಡ್ಡಾದಿಡ್ಡಿಯಾಗಿ ಸಾಗಿದ ಆಟೊ, ವಿಭಜಕಕ್ಕೆ ಡಿಕ್ಕಿಯಾಗಿ ಪೂರ್ತಿ ನಜ್ಜುಗುಜ್ಜಾಗಿದೆ. ಗಾಯಾಳು ಕೊನೆಯುಸಿರೆಳೆದರು ಎಂದು ಯಲಹಂಕ ಸಂಚಾರ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.