ADVERTISEMENT

ವಿಲ್ಸನ್‍ಗಾರ್ಡನ್: ರಸ್ತೆಯಲ್ಲಿ ಮೊಬೈಲ್, ಬೆಳ್ಳಿ ಸರ ದೋಚಿದ್ದ ಮೂವರ ಸೆರೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 19:42 IST
Last Updated 23 ನವೆಂಬರ್ 2025, 19:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಶಾಂತಿನಗರದ ಚರ್ಚ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರನನ್ನು ಅಡ್ಡಗಟ್ಟಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಮೊಬೈಲ್ ಹಾಗೂ ಬೆಳ್ಳಿ ಸರ ದೋಚಿದ್ದ ಆರೋಪಿಗಳನ್ನು ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಆಡುಗೋಡಿಯ ಸರವಣ, ಸೂರ್ಯ ಮತ್ತು ವಿಕ್ರಮ್  ಬಂಧಿತರು. ಆರೋಪಿಗಳು ನವೆಂಬರ್ 15ರ ನಸುಕಿನಲ್ಲಿ ಶಾಂತಿನಗರದ ಅಯ್ಯಪ್ಪ ದೇವಸ್ಥಾನದ ಬಳಿ ಗುರುರಾಜ್ ಎಂಬ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಮೊಬೈಲ್, ಬೆಳ್ಳಿ ಸರ ದೋಚಿ ಪರಾರಿಯಾಗಿದ್ದರು. ಆರೋಪಿಗಳಿಂದ ಮೊಬೈಲ್, ಬೆಳ್ಳಿ ಸರ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ಮಾರಾಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು  ತಿಳಿಸಿದ್ದಾರೆ.

ಸಿದ್ದಯ್ಯ ರಸ್ತೆಯ ಗುರುರಾಜ್ ಅವರು ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದಾರೆ. ಅವರು ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಆರೋಪಿಗಳು ಅಡ್ಡಗಟ್ಟಿ ಸುಲಿಗೆ ಮಾಡಿದ್ದರು. ಆರೋಪಿಗಳ ದುಷ್ಕೃತ್ಯದ ದೃಶ್ಯವು ಘಟನಾ ಸ್ಥಳದ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ದೃಶ್ಯದಲ್ಲಿದ್ದ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯ ಸುಳಿವಿನ ಜಾಡು ಹಿಡಿದು ಆರೋಪಿಗಳನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.