ADVERTISEMENT

‘ಸ್ಮಾರ್ಟ್‌ ಕ್ಲಿನಿಕ್‌’ ಆರಂಭಕ್ಕೆ ಬೇಕು ಸಮಯ, ವೈದ್ಯರು

ಆರೋಗ್ಯ ಕೇಂದ್ರಕ್ಕೆ ಬಲ l 16 ತಪಾಸಣೆಗಳು, ಆ್ಯಪ್‌ನಲ್ಲೇ ವಿವರ ದಾಖಲು

Published 26 ಆಗಸ್ಟ್ 2022, 19:45 IST
Last Updated 26 ಆಗಸ್ಟ್ 2022, 19:45 IST
ವಿಕ್ಟೋರಿಯ ಆಸ್ಪತ್ರೆಗೆ ನೀಡಲಾಗಿರುವ ಎಲೆಕ್ಟ್ರಿಕ್‌ ವಾಹನಗಳು ದೂಳು ಹಿಡಿದಿವೆ
ವಿಕ್ಟೋರಿಯ ಆಸ್ಪತ್ರೆಗೆ ನೀಡಲಾಗಿರುವ ಎಲೆಕ್ಟ್ರಿಕ್‌ ವಾಹನಗಳು ದೂಳು ಹಿಡಿದಿವೆ   

ಬೆಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆ ಯಡಿ ಡಿಜಿಟಲ್‌ ರೂಪದಲ್ಲಿ ವೈದ್ಯರ ಜೊತೆ ಸಂಪರ್ಕ ಸಾಧಿಸುವ ವ್ಯವಸ್ಥೆ ‍‘ಸ್ಮಾರ್ಟ್‌ ವರ್ಚ್ಯುಯಲ್ ಕ್ಲಿನಿಕ್‌’. ಇದನ್ನು ಬಿಬಿಎಂಪಿ ವ್ಯಾಪ್ತಿಯ 27 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಆರಂಭಿಸಲು ಯೋಜಿಸಲಾಗಿದೆ. ಇದು ಇನ್ನೂ ನೀಲನಕ್ಷೆಯ ಹಂತದಲ್ಲೇ ಇದೆ. ಪ್ರಾಯೋಗಿಕವಾಗಿ ಕೋಣನಕುಂಟೆ
ಯಲ್ಲಿ ಆರಂಭಿಸಿದ್ದರೂ ಇನ್ನೂ ಯಾರಿಗೂ ತಲುಪಿಲ್ಲ.

ಪ್ರಾಥಮಿಕ ಆರೈಕೆಯನ್ನು ಸದೃಢ ಗೊಳಿಸಿ, ವಿಶ್ವದರ್ಜೆಯ ಪ್ರಾಥಮಿಕ ಆರೋಗ್ಯ ಸೌಲಭ್ಯವನ್ನು ಸಮಾಜದ ಎಲ್ಲ ಸಮುದಾಯಕ್ಕೂ ಒದಗಿಸಬೇಕು ಎಂಬ ಮೂಲ ಉದ್ದೇಶ ‘ಸ್ಮಾರ್ಟ್‌ ವರ್ಚ್ಯುಯಲ್ ಕ್ಲಿನಿಕ್‌’. ಸಣ್ಣಪುಟ್ಟ ಚಿಕಿತ್ಸೆಗೆ ಆಸ್ಪತ್ರೆಗೇ ಹೋಗಬೇಕಾದ ಅಗತ್ಯ ಇರುವುದಿಲ್ಲ. ‘ಸ್ಮಾರ್ಟ್‌ ವರ್ಚ್ಯುಯಲ್ ಕ್ಲಿನಿಕ್‌’ಗೆ ಬರಲಿರುವ ರೋಗಿಯ ಎಲ್ಲ ವಿವರಗಳನ್ನು ಮೊಬೈಲ್‌ ಆ್ಯಪ್‌ ಮೂಲಕ ದಾಖಲಿಸಲಾಗುತ್ತದೆ. ಇಲ್ಲಿರುವ ವೈದ್ಯ ಸಿಬ್ಬಂದಿ 16 ತಪಾಸಣೆಗಳನ್ನು ಮಾಡುವ ವ್ಯವಸ್ಥೆ ಹೊಂದಲಿದ್ದಾರೆ. ಈ ಕ್ಲಿನಿಕ್‌ನಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ‘ಸೆಂಟ್ರಲ್‌ ಕ್ಲಿನಿಕಲ್‌ ಕಮ್ಯಾಂಡ್‌ ಸೆಂಟರ್‌’ಗೆ ಸಂಪರ್ಕಿಸಲಾಗುತ್ತದೆ. ಇಲ್ಲಿ 20 ತಜ್ಞವೈದ್ಯರಿರುತ್ತಾರೆ. ರೋಗಿಯ ಅಗತ್ಯಕ್ಕನುಸಾರವಾಗಿ ತಪಾಸಣೆ ನಡೆಸಲು ವೈದ್ಯರು ಸಿಬ್ಬಂದಿಗೆ ಸೂಚಿಸುತ್ತಾರೆ. ಸಲಹೆ ಹಾಗೂ ಚಿಕಿತ್ಸೆಯನ್ನು ವಿವರಿಸುತ್ತಾರೆ. ಕ್ಲಿನಿಕ್‌ನಲ್ಲಿರುವ ಸಿಬ್ಬಂದಿ ಈ ವಿವರಗಳ ಡಿಜಿಟಲೀಕರಣವನ್ನೂ ಮಾಡುತ್ತಾರೆ.

ಹೆಚ್ಚಿನ ಚಿಕಿತ್ಸೆ ಬೇಕಿದ್ದರೆ ವೈದ್ಯರು ಸೂಚಿಸುವ ಆಸ್ಪತ್ರೆಗೆ ತೆರಳಬಹುದು. ರೋಗಿ ಅಲ್ಲಿಗೆ ಹೋಗುವಮುನ್ನ ಅವರ ವಿವರವೆಲ್ಲವೂ ಆ ಆಸ್ಪತ್ರೆಗೆ ರವಾನೆಯಾಗಿರುತ್ತದೆ. ಅಂದರೆ, ಎಲ್ಲವೂ ಡಿಜಿಟಲ್‌ ಆಗಿರುವುದರಿಂದ ವೈದ್ಯ ಸಿಬ್ಬಂದಿಗೆ ಕೋಡ್‌ ಮೂಲಕ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ಸಮುದಾಯದ ಆಸ್ಪತ್ರೆಗಳಿಗೆ ಸಣ್ಣ ಚಿಕಿತ್ಸೆಗೂ ರೋಗಿಗಳು ಹೋಗುವುದು ಈ ವ್ಯವಸ್ಥೆಯಿಂದ ಕಡಿಮೆಯಾಗುತ್ತದೆ. ಆದರೆ, ಇದಿನ್ನೂ ಆರಂಭವಾಗಲು ಸಾಕಷ್ಟು ತಿಂಗಳುಗಳೇ ಬೇಕು. ಆರಂಭವಾದರೂ ತಜ್ಞವೈದ್ಯರು ಇಲ್ಲಿಗೆ ನೇಮಕವಾಗಬೇಕು.

ADVERTISEMENT

ಡಿಜಿಟಲ್‌ ಮೂಲಸೌಕರ್ಯ: ಬಿಬಿಎಂಪಿ ವ್ಯಾಪ್ತಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್‌ ಮೂಲಸೌಕರ್ಯವನ್ನು ‘ಸ್ಮಾರ್ಟ್‌ ಸಿಟಿ’ ಒದಗಿಸಿದೆ. ಕೋವಿಡ್‌ ಸಮಯದಲ್ಲಿ ರೋಗಿಗಳ ನಿಗಾವಹಿಸಲು 211 ಲ್ಯಾಪ್‌ಟಾಪ್‌, 3,337 ಟ್ಯಾಬ್ಲೆಟ್‌ಗಳನ್ನು ಆಶಾ ಕಾರ್ಯಕರ್ತೆಯರಿಗೆ ನೀಡ ಲಾಗಿದೆ. ಡೆಸ್ಕ್‌ಟಾಪ್‌, ಪ್ರಿಂಟರ್ಸ್, ಬಾರ್‌ಕೋಡ್‌ ಪ್ರಿಂಟರ್‌ಗಳನ್ನೂ ಒದಗಿಸಲಾಗಿದೆ. ಇದಕ್ಕಾಗಿ ₹ 10.83 ಕೋಟಿ ವೆಚ್ಚ ಮಾಡಲಾಗಿದೆ.

ದೂಳು ತುಂಬಿದ ವಾಹನಗಳು

ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ‘ಸ್ಮಾರ್ಟ್‌ ಸಿಟಿ’ ₹10.65 ಕೋಟಿಯನ್ನೇ ವೆಚ್ಚ ಮಾಡಿದೆ. ಪ್ರವೇಶ ದ್ವಾರ, ರಸ್ತೆ, ಪಾದಚಾರಿ ಮಾರ್ಗ, ಪಾರ್ಕಿಂಗ್‌ ಸ್ಥಳ, ಉದ್ಯಾನ ಅಭಿವೃದ್ಧಿ ಮಾಡಿದೆ. ಇದಲ್ಲದೆ, ರೋಗಿಗಳು, ವಿಐಪಿಗಳು ಬಂದಾಗ ಉಪಯೋಗಿಸಬಹುದಾದ 5 ಎಲೆಕ್ಟ್ರಿಕ್‌ ವಾಹನಗಳನ್ನೂ ನೀಡಿದೆ. ಇವುಗಳೆಲ್ಲವನ್ನೂ ಆಸ್ಪತ್ರೆಗೆ ನೀಡಲಾಗಿದೆ. ಆದರೆ, ಈ ವಾಹನಗಳನ್ನು ಉಪಯೋಗಿಸದೆ, ದೂಳು ತುಂಬಿಕೊಂಡಿವೆ.

ವಾಣಿ ವಿಲಾಸ ಆಸ್ಪತ್ರೆಗೆ ₹18.40 ಕೋಟಿ ಮೌಲ್ಯದ ಉಪಕರಣಗಳನ್ನು ನೀಡಲಾಗಿದೆ. ಕಿದ್ವಾಯಿ, ವಿಕ್ಟೋರಿಯಾ, ರಾಜೀವ್‌ ಗಾಂಧಿ ಆಸ್ಪತ್ರೆಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಉಪಕರಣಗಳನ್ನು ಈಗಾಗಲೇ ಒದಗಿಸಲಾಗಿದೆ. ಅಲ್ಲದೆ, ಲಿಫ್ಟ್‌, ರ‍್ಯಾಂಪ್‌ಗಳನ್ನೂ ಒದಗಿಸಲಾಗುತ್ತಿದೆ. ಕಿದ್ವಾಯ್ ಆಸ್ಪತ್ರೆಯಲ್ಲಿ ಜಿನೊಮಿಕ್‌ ಲ್ಯಾಪ್‌ ಸ್ಥಾಪಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.