ADVERTISEMENT

ರಸ್ತೆ ಗುಂಡಿ | ವೈಟ್‌ ಟಾಪಿಂಗ್‌ನಲ್ಲೂ ಗುಂಡಿಗೆ ಮುಕ್ತಿ ಇಲ್ಲ

ಕಿಲೋ ಮೀಟರ್‌ಗೆ ₹10 ಕೋಟಿ ವೆಚ್ಚ ಮಾಡಿದರೂ ಅವ್ಯವಸ್ಥೆಯದ್ದೇ ಆಗರ

ಆರ್. ಮಂಜುನಾಥ್
Published 13 ಜೂನ್ 2025, 19:35 IST
Last Updated 13 ಜೂನ್ 2025, 19:35 IST
ಬಿವಿಕೆ ಅಯ್ಯಂಗಾರ್ ರಸ್ತೆಯ ವೈಟ್‌ ಟಾಪಿಂಗ್‌ ನಡುವೆ ಗುಂಡಿ
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್‌
ಬಿವಿಕೆ ಅಯ್ಯಂಗಾರ್ ರಸ್ತೆಯ ವೈಟ್‌ ಟಾಪಿಂಗ್‌ ನಡುವೆ ಗುಂಡಿ ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್‌   

ಬೆಂಗಳೂರು: ರಸ್ತೆಗೆ ಡಾಂಬರೀಕಣದ (ಬ್ಲ್ಯಾಕ್‌ ಟಾಪಿಂಗ್‌) ಬದಲು ಕಾಂಕ್ರೀಟೀಕರಣ (ವೈಟ್‌ ಟಾಪಿಂಗ್) ಮಾಡಿದರೆ ರಸ್ತೆಗಳು 25 ವರ್ಷ ಬಾಳಿಕೆ ಬರುತ್ತವೆ ಎಂದು ಒಂದು ಕಿ.ಮೀಗೆ ₹10 ಕೋಟಿ ವೆಚ್ಚ ಮಾಡಿರುವ ರಸ್ತೆಗಳಲ್ಲೂ ಗುಂಡಿಗೆ ಮುಕ್ತಿ ಸಿಕ್ಕಿಲ್ಲ.

ನಗರದ ಎಲ್ಲ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳನ್ನು ವೈಟ್‌ ಟಾಪಿಂಗ್‌ ಮಾಡಲು ಬಿಬಿಎಂಪಿ ಹಲವು ವರ್ಷಗಳಿಂದ ಯೋಜನೆ ರೂಪಿಸಿದೆ. ಹಲವು ರಸ್ತೆಗಳು ವೈಟ್‌ ಟಾಪಿಂಗ್‌ ಆಗಿವೆ. ₹1800 ಕೋಟಿ ವೆಚ್ಚದಲ್ಲಿ ಹಲವು ರಸ್ತೆಗಳಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ಆರಂಭ ಆಗಿದೆ. ಆದರೆ,  ನಾಲ್ಕಾರು ವರ್ಷಗಳ ಹಿಂದೆ ಕಾಮಗಾರಿ ಪೂರ್ಣಗೊಂಡಿರುವ ವೈಟ್‌ ಟಾಪಿಂಗ್‌ ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಳ್ಳುತ್ತಿವೆ. ಇವುಗಳ ದುರಸ್ತಿಯೂ ಆಗುತ್ತಿಲ್ಲ.

ಬಿವಿಕೆ ಅಯ್ಯಂಗಾರ್‌ ರಸ್ತೆಯಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ಪೂರ್ಣಗೊಂಡು ಒಂದು ವರ್ಷವೂ ಆಗಿಲ್ಲ, ಅಲ್ಲಿ ಆಗಲೇ ಗುಂಡಿಗಳು ಪ್ರತ್ಯಕ್ಷವಾಗಿವೆ.  ಸುಮಾರು 25 ವರ್ಷ ಯಾವುದೇ ಸಮಸ್ಯೆ ಇಲ್ಲ ಎಂದು ಬಿಬಿಎಂಪಿ ನೀಡಿದ್ದ ಭರವಸೆ ಸುಳ್ಳಾಗಿದೆ. ವೈಟ್‌ ಟಾಪಿಂಗ್ ರಸ್ತೆ ಕೂಡ ಗುಂಡಿಯಿಂದ ಹೊರತಲ್ಲ ಎಂಬುದಕ್ಕೆ ಒಂದು ಉದಾಹರಣೆ ಅಷ್ಟೇ.

ADVERTISEMENT

ಮೈಸೂರು ರಸ್ತೆ, ಸುಮನಹಳ್ಳಿ ವರ್ತುಲ ರಸ್ತೆ, ಇಂದಿರಾನಗರ ರಸ್ತೆ, ನೃಪತುಂಗ ರಸ್ತೆ ಸೇರಿದಂತೆ ವೈಟ್‌ಟಾಪಿಂಗ್‌ ಮಾಡಿರುವ ಹಲವು ರಸ್ತೆಗಳಲ್ಲಿ ಗುಂಡಿಗಳನ್ನು ಕಾಣಬಹುದು. ಇವುಗಳ ದುರಸ್ತಿಯನ್ನು ಬಿಬಿಎಂಪಿ ಮಾಡುತ್ತಿಲ್ಲ. ಸ್ಥಳೀಯರೇ ರಸ್ತೆ ಬದಿ ಸಿಗುವ ಕಲ್ಲು, ಇಟ್ಟಿಗೆಯನ್ನು ಸುರಿಯುತ್ತಾರೆ. ಇಲ್ಲದಿದ್ದರೆ, ಸಂಚಾರ ಪೊಲೀಸರು ಕಾಂಕ್ರೀಟ್‌ ಸಾಗಿಸುವ ಟ್ರಕ್‌ನ ಚಾಲಕನಿಗೆ ಹೇಳಿ ಕಾಂಕ್ರೀಟ್‌ ಹಾಕಿಸುತ್ತಾರೆ.

‘ಬಿವಿಕೆ ಅಯ್ಯಂಗಾರ್‌ ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಮಾಡುವಾಗ ಹಲವು ವರ್ಷ ಸಾಕಷ್ಟು ಸಮಸ್ಯೆಯಾಯಿತು. ಕಾಮಗಾರಿ ಮುಗಿದ ಮೇಲೆ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ದೂರು ನೀಡಿದರೆ ಯಾರೂ ಬರುವುದಿಲ್ಲ. ಮಣ್ಣು–ಕಲ್ಲು ಹಾಕಿ ನಾವೇ ಸರಿಪಡಿಸಿಕೊಳ್ಳಬೇಕಿದೆ’ ಎಂದು ವ್ಯಾಪಾರಿ ಮನೋಹರ್‌ ಹೇಳಿದರು.

ಸುಮನಹಳ್ಳಿ– ವಿಶ್ವನೀಡಂ ಅಂಚೆ 1ನೇ ಅಡ್ಡರಸ್ತೆಯ ದುಃಸ್ಥಿತಿ ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್

ನಾಗರಿಕರಿಗೆ ದುಃಸ್ವಪ್ನ

ರಸ್ತೆಯೊಂದರಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ಆರಂಭವಾಯಿತೆಂದರೆ ಸುತ್ತಮುತ್ತಲಿನ ನಿವಾಸಿಗಳು ಕನಿಷ್ಠ ಒಂದು ವರ್ಷ ಸಂಚಾರಕ್ಕೆ ಪರದಾಡುತ್ತಾರೆ. ಆಮೆಗಿಂತ ಕಡಿಮೆ ವೇಗದಲ್ಲಿ ಕಾಮಗಾರಿ ನಡೆಯುತ್ತದೆ. ಮನೆಯಿಂದ ವಾಹನವನ್ನು ತಿಂಗಳುಗಟ್ಟಲೆ ಹೊರತರಲು ಸಾಧ್ಯವಾಗುವುದಿಲ್ಲ. ಚರಂಡಿಯ ಕೆಲಸ ಮುಗಿಯುವುದಕ್ಕೆ ಹಲವು ತಿಂಗಳುಗಳೇ ಬೇಕು. ಹೀಗಾಗಿ ನಾಗರಿಕರಿಗೆ ವೈಟ್‌ ಟಾಪಿಂಗ್‌ ಕಾಮಗಾರಿ ದುಃಸ್ವಪ್ನವಾಗಿ ಕಾಡುತ್ತಿದೆ. ‘ಗೋವಿಂದರಾಜನಗರ 1ನೇ ಮುಖ್ಯರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ ಆರಂಭವಾಗಿ ಆರು ತಿಂಗಳು ಕಳೆದಿದೆ. ಸುಮಾರು ಒಂದು ಕಿ.ಮೀಗೂ ಕಡಿಮೆ ಇರುವ ಈ ರಸ್ತೆಯಲ್ಲಿ ಒಂದು ಬದಿಯ ಚರಂಡಿ ಕಾಮಗಾರಿ ಮಾತ್ರ ಮುಗಿದಿದೆ. ನಿತ್ಯವೂ ಒಂದಲ್ಲ ಒಂದು ಕಡೆ ತಡೆ ಹಾಕುತ್ತಾರೆ. ಸಂಚಾರ ಕಷ್ಟಸಾಧ್ಯವಾಗಿದೆ’ ಎಂದು ಚಂದ್ರಪ್ಪ ದೂರಿದರು.

ವಾರ್ಡ್‌ ರಸ್ತೆಗಳ ನಿರ್ಲಕ್ಷ್ಯ

ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಮುಖ್ಯ ಆಯುಕ್ತರೆಲ್ಲರೂ  ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿ ತಪಾಸಣೆ ಮಾಡುತ್ತಾರೆ.  ಆದರೆ ನಾಗರಿಕರು ವಾಸಿಸುವ ವಾರ್ಡ್‌ ರಸ್ತೆಗಳತ್ತ ವಲಯ ಆಯುಕ್ತರು ಮುಖ್ಯ ಎಂಜಿನಿಯರ್‌ ವಾರ್ಡ್‌ ಎಂಜಿನಿಯರ್‌ ತಲೆ ಹಾಕುವುದಿಲ್ಲ.  ವಾರ್ಡ್‌ಗಳ ರಸ್ತೆಗಳ ಅಭಿವೃದ್ಧಿ ಹಾಗೂ ಗುಂಡಿಗಳ ದುರಸ್ತಿಗೆ ಪ್ರತ್ಯೇಕ ಅನುದಾನವಿದ್ದರೂ ಈ ಬಗ್ಗೆ ವಲಯ ಆಯುಕ್ತರ ನಿರಾಸಕ್ತಿಯಿಂದ ರಸ್ತೆಗಳು ಗುಂಡಿಗಳಿಂದ ಕೂಡಿವೆ. ಮಳೆಗಾಲ ಆರಂಭವಾದ ಮೇಲಂತೂ ದುರಸ್ತಿ ಕಾರ್ಯ ನಡೆಯುವುದಿಲ್ಲ. ಈ ಅನುದಾನದಲ್ಲಿ ಉಳಿದ ಹಣವನ್ನು ಬೇರೆ ಕಾಮಗಾರಿಗೆ ವಿನಿಯೋಗಿಸುತ್ತಾರೆ. ಗುಂಡಿಗಳು ಹಾಗೆಯೇ ಉಳಿಯುತ್ತವೆ. ಇದು ಎಂಟೂ ವಲಯಗಳಲ್ಲಿರುವ ವಾರ್ಡ್‌ಗಳ ಸಮಸ್ಯೆಯಾಗಿದೆ. ‘ರಾಜರಾಜೇಶ್ವರಿನಗರ ವಾರ್ಡ್‌ನ ಹಲವು ರಸ್ತೆಗಳಲ್ಲಿ ಗುಂಡಿಗಳೇ ಇವೆ. ದೂರು ನೀಡಿದಾಗ ಒಂದೆರಡು ಕಡೆ ವೆಟ್‌ ಮಿಕ್ಸ್‌ ಹಾಕುತ್ತಾರೆ. ವಾರದ ನಂತರ ಕಲ್ಲೆಲ್ಲ ಹೋಗಿ ಮತ್ತೆ ಗುಂಡಿಯಾಗುತ್ತದೆ. ಕೆಲವೆಡೆ ಡಾಂಬರು ಹಾಕಿದ್ದರೂ ಸಂಪೂರ್ಣವಾಗಿ ಗುಂಡಿ ಮುಚ್ಚಲ್ಲ’ ಎಂದು ಟಿ.ಇ. ಶ್ರೀನಿವಾಸ್‌ ದೂರಿದರು.

ರಸ್ತೆ ಗುಂಡಿ ಕಂಡರೆ ಫೋಟೊ ಕಳುಹಿಸಿ

ನಾಗರಿಕರು ತಾವು ವಾಸಿಸುವ ಹಾಗೂ ಸಂಚರಿಸುವ ರಸ್ತೆಗಳಲ್ಲಿ ಗುಂಡಿ ಕಂಡರೆ ಅದರ ಚಿತ್ರ ಸಹಿತ ಮಾಹಿತಿಯನ್ನು ‘ಪ್ರಜಾವಾಣಿ’ಗೆ ಕಳುಹಿಸಿಕೊಡಬಹುದು. ನಿಮ್ಮ ಹೆಸರು ಹಾಗೂ ವಿಳಾಸವಿರಲಿ.
ವಾಟ್ಸ್‌ ಆ್ಯಪ್‌: 9606038256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.