
ಬೆಂಗಳೂರು: ‘ಟಿ.ವಿ ಧಾರಾವಾಹಿಗಳಲ್ಲಿ ಹೆಣ್ಣುಮಕ್ಕಳನ್ನು ವಿಲನ್ ರೀತಿಯಲ್ಲಿ ಬಿಂಬಿಸಿ ದ್ವೇಷ ಬಿತ್ತುವ ಬದಲು ಜನಪದ, ಸಾಹಿತ್ಯ, ಗಾದೆ, ಒಗಟುಗಳ ಮೂಲಕ ಜನರಲ್ಲಿ ಕಲೆ, ಸಂಸ್ಕೃತಿಯ ಒಲವು ಹೆಚ್ಚಿಸಿ’ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಸಲಹೆ ನೀಡಿದರು.
ಕರ್ನಾಟಕ ಜಾನಪದ ಪರಿಷತ್ತು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 2025ನೇ ಸಾಲಿನ ನಾಡೋಜ ಎಚ್.ಎಲ್.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿಯನ್ನು ತಮಿಳುನಾಡಿನ ತೆರುಕೂತು ಕಲಾವಿದ ಟಿ.ಲಕ್ಷ್ಮೀಪತಿ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
‘ಜನರು ಹೆಚ್ಚಾಗಿ ನೋಡುವ ಟಿ.ವಿ ಧಾರಾವಾಹಿಗಳಲ್ಲಿ ಮೌಲ್ಯಾಧಾರಿತ ವಿಷಯಗಳಿಗೆ ಆದ್ಯತೆ ನೀಡಬೇಕು. ಜನಪದ ಮಹತ್ವದ ವಿಚಾರವನ್ನು ಸೇರಿಸಿದಾಗ ಅದು ನಮ್ಮ ಕಲೆ, ಸಂಸ್ಕೃತಿಯನ್ನು ಗೌರವಿಸಿದಂತೆ. ಜನಪದ ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ನಮ್ಮಿಂದಲೇ ಆಗಬೇಕು’ ಎಂದು ಹೇಳಿದರು.
ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ‘ಹಿರಿಯ ಅಧಿಕಾರಿಯಾಗಿದ್ದ ನಾಗೇಗೌಡರು ನೆಲ ಸಂಸ್ಕೃತಿ, ಮೂಲ ಬೇರನ್ನು ಮರೆಯಲಿಲ್ಲ. ಲೇಖಕರಾಗಿ, ಜನಪದ ವಿದ್ವಾಂಸರಾಗಿ, ಕ್ಷೇತ್ರ ಕಾರ್ಯದ ಮೂಲಕ ಜಾನಪದ ಲೋಕ ಹಾಗೂ ಪರಿಷತ್ತನ್ನು ಸ್ಥಾಪಿಸಿ ಕಲೆ ಉಳಿಸಲು ಶ್ರಮಿಸಿದರು’ ಎಂದು ಹೇಳಿದರು.
ಆದಿಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮೀಜಿ, ಜಾನಪದ ಪರಿಷತ್ತಿನ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ, ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.