ADVERTISEMENT

ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಒಂಟಿ ಮನೆಯಲ್ಲಿ ಸಿಕ್ಕಿಬಿದ್ದ ಕಳ್ಳ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 19:48 IST
Last Updated 5 ಫೆಬ್ರುವರಿ 2022, 19:48 IST

ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ಆರೋಪಿ ಭರತ್‌ಕುಮಾರ್ ಎಂಬಾತನನ್ನು ಸಾರ್ವಜನಿಕರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಭಾರತಿ (51), ಅವರ ಮಕ್ಕಳಾದ ಸಿಂಚನಾ (34), ಸಿಂಧುರಾಣಿ (33) ಹಾಗೂ ಮಧುಸಾಗರ್ (25) ಕೆಲ ತಿಂಗಳ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಡಿ ಭಾರತಿ ಅವರ ಪತಿ ಹಲ್ಲೇಗೆರೆ ಶಂಕರ್ ಹಾಗೂ ಅಳಿಯಂದಿರನ್ನು ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.

'ಆತ್ಮಹತ್ಯೆ ನಂತರ ಮನೆಯಲ್ಲಿ ಯಾರೂ ಇಲ್ಲ. ಜೊತೆಗೆ, ಸ್ಥಳೀಯರೂ ಮನೆ ಬಳಿ ಹೋಗಲು ಭಯಪಡುತ್ತಾರೆ. ಇಂಥ ಸಂದರ್ಭದಲ್ಲೇ ಆರೋಪಿ ಭರತ್‌ಕುಮಾರ್, ರಾತ್ರಿ ಮನೆಯೊಳಗೆ ನುಗ್ಗಿದ್ದ. ಮೊಬೈಲ್ ಟಾರ್ಚ್‌ ಹಿಡಿದು ಕೊಠಡಿ ಹಾಗೂ ಹಲವೆಡೆ ಹುಡುಕಾಡಿದ್ದ. ಒಂಟಿ ಮನೆಯಲ್ಲಿ ಅಪರಿಚಿತನನ್ನು ಗಮನಿಸಿದ್ದ ಸ್ಥಳೀಯರು, ಭಯಗೊಂಡಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಕೆಲ ಯುವಕರು, ಮನೆ ಬಳಿ ಹೋಗಿ ನೋಡಿದ್ದರು. ದೇವರ ಕೊಠಡಿ ಸೇರಿದ್ದ ಆರೋಪಿ, ಮನೆಯಲ್ಲಿ ದೆವ್ವ ಇರುವುದಾಗಿ ಕಥೆ ಕಟ್ಟಿದ್ದ. ಸ್ಥಳೀಯರು ಹಿಡಿಯಲು ಹೋದಾಗ, ಮನೆಯಿಂದ ಹೊರಗೆ ಓಡಿದ್ದ. ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದರು. ನಂತರ, ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ವಶಕ್ಕೆ ಆರೋಪಿಯನ್ನು ಒಪ್ಪಿಸಿದ್ದಾರೆ' ಎಂದೂ ತಿಳಿಸಿದರು. ‘ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆತನ ಪೂರ್ವಾಪರ ಸದ್ಯಕ್ಕೆ ಗೊತ್ತಾಗಿಲ್ಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.