ಸಾಂದರ್ಭಿಕ ಚಿತ್ರ
ಬೆಂಗಳೂರು: ವಿವೇಕ್‌ನಗರದ ವಿಕ್ಟೋರಿಯಾ ಲೇಔಟ್‌ನಲ್ಲಿರುವ ಎಟಿಎಂನಲ್ಲಿದ್ದ ₹20.12 ಲಕ್ಷ ದೋಚಿದ್ದ ಹಣ ತುಂಬುವ ಏಜೆನ್ಸಿಯ ಇಬ್ಬರು ಮಾಜಿ ನೌಕರರು ಸೇರಿ ಮೂವರನ್ನು ವಿವೇಕ್‌ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮುರುಳಿ (23), ಪೋತಾಲು ಸಾಹಿತೇಜ (23), ಎರಿಕಲಾ ವೆಂಕಟೇಶ (28) ಬಂಧಿತರು.
ಬಂಧಿತರಿಂದ ₹ 20.12 ಲಕ್ಷ ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಎಟಿಎಂಗಳಿಗೆ ಹಣ ಹಾಕುವ ಸೆಕ್ಯೂರಿಟಿ ವ್ಯಾಲ್ಯೂ ಇಂಡಿಯಾ ಏಜೆನ್ಸಿಯಲ್ಲಿ ಆರೋಪಿ ಮುರುಳಿ ಕೆಲಸ ಮಾಡುತ್ತಿದ್ದ. 2022ರಲ್ಲಿ ಕೆಲಸ ಬಿಟ್ಟಿದ್ದ. ಅದೇ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಎರಿಕಾಲಾ ವೆಂಕಟೇಶ ಹಾಗೂ ಮುರಳಿ ಒಂದೇ ಊರಿನವರು. ಇತ್ತ ಕೆಲಸ ಬಿಟ್ಟು ಊರಿಗೆ ಹೋಗಿದ್ದ ಮುರುಳಿ ಸಾಲ ಮಾಡಿಕೊಂಡಿದ್ದ. ಸಾಲ ಮಾಡಿದ್ದ ವಿಚಾರವನ್ನು ವೆಂಕಟೇಶ್‌ಗೆ ಮುರಳಿ ತಿಳಿಸಿದ್ದ. ನಂತರ, ಎಟಿಎಂನಿಂದ ಹಣ ಕಳವು ಮಾಡಲು ಯೋಜನೆ ರೂಪಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಎಟಿಎಂಗೆ ಹಣ ಹಾಕಲು 12 ಸಂಖ್ಯೆಯ ಪಿನ್ ನಂಬರ್‌ಗಳನ್ನು ಕಸ್ಟೋಡಿಯನ್‌ಗಳಿಗೆ ನೀಡಲಾಗಿರುತ್ತದೆ. ಇಬ್ಬರು ವ್ಯಕ್ತಿಗಳಿಗೆ ತಲಾ 6 ಸಂಖ್ಯೆ ಪಾಸ್‌ವರ್ಡ್ ಕೊಡುತ್ತಾರೆ. ಈ ಹಿಂದೆ ಮುರಳಿ ಮೊದಲ 6 ಪಾಸ್‌ವರ್ಡ್ ಅನ್ನು ಪಡೆದು ಬರೆದಿಟ್ಟುಕೊಂಡು ಕೆಲಸ ಬಿಟ್ಟಿದ್ದ. ಇದಾದ ಬಳಿಕ ಕೊನೆಯ 6 ಪಾಸ್‌ವರ್ಡ್ ಅನ್ನು ಎರಿಕಾಲ ವೆಂಕಟೇಶ್‌ಗೆ ತಿಳಿದಿತ್ತು. ಕಳವು ಮಾಡಿದ ಹಣ ಹಂಚಿಕೊಳ್ಳುವ ಷರತ್ತು ಆಧರಿಸಿ ವೆಂಕಟೇಶ್ ತನ್ನ ಬಳಿಯಿದ್ದ ಪಾಸ್‌ವರ್ಡ್ ಅನ್ನು ಮುರಳಿಗೆ ನೀಡಿದ್ದ. ಪೋತಾಲು ಸಾಹಿತೇಜ ಜತೆಗೆ ಸೇರಿಕೊಂಡು ಎಟಿಎಂನಿಂದ ಹಣ ದೋಚಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.