ಪೀಣ್ಯ ದಾಸರಹಳ್ಳಿ: ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ(ಬಿಐಇಸಿ)ದಲ್ಲಿ ಮೂರು ದಿನಗಳು ನಡೆಯುವ ಇಂಡಿಯನ್ ಗ್ರೀನ್ ಎನರ್ಜಿ ಎಕ್ಸ್‌ಪೊಗೆ ಸೋಮವಾರ ಅದ್ದೂರಿ ಚಾಲನೆ ದೊರೆಯಿತು.
ನವೀಕೃತ ಇಂಧನ ವಲಯದ ಉತ್ಪಾದಕರು, ಪರಿಕರಗಳ ಉತ್ಪಾದಕರ ಸಂಘ, ತಂತ್ರಜ್ಞಾನ ಪೂರೈಕೆದಾರರು ಮತ್ತು ಸಮಾಲೋಚಕರ ಸಹಯೋಗದಲ್ಲಿ ಈ ಎಕ್ಸ್‌ಪೊ ಆಯೋಜಿಸಲಾಗಿದೆ. ಬೆಸ್ಕಾಂ, ಕ್ರೆಡೆಲ್ ಒಳಗೊಂಡಂತೆ 100ಕ್ಕೂ ಅಧಿಕ ಸಂಸ್ಥೆಗಳು ಮೇಳಕ್ಕೆ ಬೆಂಬಲ ನೀಡಿವೆ.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಚಾಲನೆ ನೀಡಿ ಮಾತನಾಡಿ, ‘ಇಂಧನ ಇಲಾಖೆ ಹಸಿರು ಇಂಧನಕ್ಕೆ ಒತ್ತು ನೀಡಿದ್ದು, ‘ಕುಸುಮ್’ ಯೋಜನೆ ಅಡಿ 1,181 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 371 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಟೆಂಡರ್ ಅಂತಿಮಗೊಳಿಸಲಾಗಿದೆ. 379 ಮೆಗಾವಾಟ್‌ಗೆ ವಿದ್ಯುತ್ ಉತ್ಪಾದನೆಗೆ ಟೆಂಡರ್ ಕರೆಯಲಾಗುತ್ತಿದೆ. ಇದರಿಂದ ರೈತರಿಗೆ ಹಗಲು ಹೊತ್ತಿನಲ್ಲಿ 7 ತಾಸು ವಿದ್ಯುತ್ ನೀಡಲು ಸಹಕಾರಿಯಾಗಲಿದೆ‘ ಎಂದರು.
‘ಮನೆಯ ಚಾವಣಿಯಲ್ಲಿ ಸೌರ ವಿದ್ಯುತ್ ಅಳವಡಿಸಿಕೊಳ್ಳುವ ಸಂಬಂಧ ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಯನ್ನು ಜಾರಿಗೊಳಿಸಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ 300 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ‘ ಎಂದರು.
ಹೈದರಾಬಾದ್‌ನ ಮೀಡಿಯಾ ಡೇ ಮಾರ್ಕೆಟಿಂಗ್ ನಿರ್ದೇಶಕ ಮೊಹಮದ್ ಮುದಸ್ಸಿರ್ ಮಾತನಾಡಿ, ನೂರಕ್ಕೂ ಅಧಿಕ ಜಾಗತಿಕ ಮತ್ತು ರಾಷ್ಟ್ರೀಯಮಟ್ಟದ ಕಂಪನಿಗಳು ಮೇಳದಲ್ಲಿ ಭಾಗವಹಿಸಿವೆ. ಇನ್ನಷ್ಟು ಪಾಲುದಾರರನ್ನು ಸೇರಿಸಿಕೊಂಡು ಮೇಳವನ್ನು ಯಶಸ್ವಿಗೊಳಿಸಲಾಗುತ್ತಿದೆ ಎಂದರು.
ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ಕ್ರೆಡೆಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ, ಆಲ್ ಇಂಡಿಯಾ ಸೋಲಾರ್ ಥರ್ಮಲ್ ಫೆಡರೇಷನ್ ಅಧ್ಯಕ್ಷ ಕೆ.ಆರ್.ಸುರೇಂದ್ರ ಕುಮಾರ್, ಫೆರ್ರಿ ಸಂಸ್ಥೆ ಅಧ್ಯಕ್ಷ ರಮೇಶ್ ಶಿವಣ್ಣ, ಪ್ರೈಡ್ ನವೀಕೃತ ಇಂಧನ ಸಂಸ್ಥೆಯ ನಿರ್ದೇಶಕ ಎ.ಸಿ.ಈಶ್ವರ್ ಮೀಡಿಯಾ ಡೇ ಮಾರ್ಕೇಟಿಂಗ್ ನಿರ್ದೇಶಕರಾದ ರಾಮ್ ಸೌಂದಲ್ಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.