ADVERTISEMENT

ಒಂದೇ ಕುಟುಂಬದ ಮೂವರು ಸಾವು: ಆತ್ಮಹತ್ಯೆ ಶಂಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 20:57 IST
Last Updated 21 ಅಕ್ಟೋಬರ್ 2022, 20:57 IST
   

ಬೆಂಗಳೂರು: ಎಚ್‌ಎಸ್‌ಆರ್‌ ಲೇಔಟ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಒಂದೇ ಕುಟುಂಬದ ಮೂವರು ಶುಕ್ರವಾರ ಬೆಳಿಗ್ಗೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

‘ಮೂರನೇ ಹಂತದ ನಿವಾಸಿ ಸಂತೋಷ್‌ಕುಮಾರ್ (54), ಅವರ ಪತ್ನಿ ಓಮನ್ (50) ಹಾಗೂ ಮಗಳು ಸನುಷಾ (17) ಮೃತರು.
ಪೂರ್ಣ ಸುಟ್ಟಿರುವ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೇರಳದ ಸಂತೋಷ್, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಯಂತ್ರೋಪಕರಣಗಳ ಬಿಡಿಭಾಗ ತಯಾರಿಸುವ ಉದ್ಯಮ ನಡೆಸುತ್ತಿದ್ದ ಸಂತೋಷ್, ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸ್ವಂತ ಕಾರ್ಖಾನೆ ಹೊಂದಿದ್ದರು. ಪತ್ನಿ ಹಾಗೂ ಮಗಳ ಜೊತೆ ವಾಸವಿದ್ದರು.’

ADVERTISEMENT

‘ಶುಕ್ರವಾರ ಬೆಳಿಗ್ಗೆ ಸಂತೋಷ್ ಅವರ ಮನೆಯಿಂದ ದಟ್ಟ ಹೊಗೆ ಬರುತ್ತಿತ್ತು. ಸ್ಥಳೀಯರು, ಮನೆ ಬಳಿ ಹೋಗಿ ನೋಡಿದಾಗ ಬೆಂಕಿ ಹೊತ್ತಿ ಉರಿಯುತ್ತಿತ್ತು. ಮೂವರ ಚೀರಾಟ ಕೇಳಿಸುತ್ತಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದರು. ಮೂವರ ಮೃತದೇಹಗಳು ಸುಟ್ಟ ಸ್ಥಿತಿಯಲ್ಲಿ ಕಂಡವು’ ಎಂದು ಪೊಲೀಸರು ತಿಳಿಸಿದರು.

ಆತ್ಮಹತ್ಯೆ ಅನುಮಾನ: ‘ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿಕೊಂಡಿದ್ದ ಮೂವರು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನವಿದೆ. ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸ್ಥಳೀಯರು ಬಾಗಿಲು ತೆರೆದು ಮೂವರನ್ನೂ ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ, ಒಳಗಿನಿಂದ ಲಾಕ್‌ ಆಗಿದ್ದರಿಂದ ಬಾಗಿಲು ತೆರೆಯಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಸ್ಥಳೀಯರಿಂದ ಹೇಳಿಕೆ ಪಡೆಯಲಾಗಿದೆ’ ಎಂದು ತಿಳಿಸಿದರು.

ಕಾರ್ಖಾನೆ ಅಭಿವೃದ್ಧಿಗೆ ಸಾಲ: ‘ಉದ್ಯಮಿ ಸಂತೋಷ್ ಕುಮಾರ್, ತಮ್ಮ ಕಾರ್ಖಾನೆ ಅಭಿವೃದ್ಧಿಗಾಗಿ ಹಲವರ ಬಳಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಆದರೆ, ಕಾರ್ಖಾನೆ ವ್ಯವಹಾರದಲ್ಲಿ ನಷ್ಟವಾಗಿತ್ತು. ಸಾಲವನ್ನು ವಾಪಸು ತೀರಿಸಲಾಗದೇ ಕಷ್ಟಕ್ಕೆ ಸಿಲುಕಿದ್ದರೆಂಬುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಸಾಲ ವಾಪಸು ನೀಡುವಂತೆ ಸಾಲಗಾರರು ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಸಂತೋಷ್, ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಮೂವರ ಸಾವಿನ ಬಗ್ಗೆ ಹೊರ ರಾಜ್ಯದಲ್ಲಿರುವ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಅವರು ನಗರಕ್ಕೆ ಬಂದ ಬಳಿಕವೇ ಹೇಳಿಕೆ ಪಡೆದು ಮರಣೋತ್ತ ಪರೀಕ್ಷೆ ನಡೆಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.