ADVERTISEMENT

ಟಿಕೆಟ್‌ ಆಕಾಂಕ್ಷಿ ಜಿ. ಧನಂಜಯ್ ಪ್ರಚಾರಕ್ಕೆ ಕಾಂಗ್ರೆಸ್ಸಿಗರಿಂದಲೇ ಅಡ್ಡಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 20:34 IST
Last Updated 29 ಮಾರ್ಚ್ 2023, 20:34 IST
ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಯಾಗಿರುವ ಜಿ. ಧನಂಜಯ್ ಅವರು ಚುನಾವಣಾ ಪ್ರಚಾರ ಮಾಡುವಾಗ ಪಕ್ಷದ ಇತರೆ ಟಿಕೆಟ್‌ ಆಕಾಂಕ್ಷಿಗಳ ಬೆಂಬಲಿಗರು ಅಡ್ಡಿಪಡಿಸಿದರು.
ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಯಾಗಿರುವ ಜಿ. ಧನಂಜಯ್ ಅವರು ಚುನಾವಣಾ ಪ್ರಚಾರ ಮಾಡುವಾಗ ಪಕ್ಷದ ಇತರೆ ಟಿಕೆಟ್‌ ಆಕಾಂಕ್ಷಿಗಳ ಬೆಂಬಲಿಗರು ಅಡ್ಡಿಪಡಿಸಿದರು.   

ಪೀಣ್ಯ ದಾಸರಹಳ್ಳಿ: ‘ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ನಾನೇ’ ಎಂದು ಪ್ರಚಾರ ಹಮ್ಮಿಕೊಂಡಿದ್ದ ಜಿ. ಧನಂಜಯ್‌ ಅವರ ವಿರುದ್ಧ ಕಾಂಗ್ರೆಸ್‌ ಪಕ್ಷದ ಇತರೆ ಅಭ್ಯರ್ಥಿಗಳು ಬುಧವಾರ ಅಡ್ಡಿಪಡಿಸಿದ್ದಾರೆ.

ಕ್ಷೇತ್ರದ ಇತರೆ ಟಿಕೆಟ್ ಆಕಾಂಕ್ಷಿಗಳಾದ ಕೆ.ಸಿ. ಅಶೋಕ್, ಕೆ. ನಾಗಭೂಷಣ್ ಹಾಗೂ ಗೀತಾ ಶಿವರಾಮ್ ಅವರು ತಮ್ಮ ಬೆಂಬಲಿಗರೊಂದಿಗೆ ಬಂದು, ಹೈಕಮಾಂಡ್‌ ಅಧಿಕೃತ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಆದ್ದರಿಂದ ಚುನಾವಣಾ ಪ್ರಚಾರ ಕೈಗೊಳ್ಳಬಾರದು ಎಂದು ಗೋ ಬ್ಯಾಕ್ ಧನಂಜಯ್ ಎಂದು ಕೂಗುತ್ತಾ ಪ್ರಚಾರ ಕಾರ್ಯಕ್ಕೆ ಅಡ್ಡಿಪಡಿಸಿದರು. ಗಂಗಮ್ಮನ ಗುಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಈ ವೇಳೆ ಮಾತನಾಡಿದ ಜಿ ಧನಂಜಯ್, 'ನಾನು ಕ್ಷೇತ್ರದ ಶಾಸಕರ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದೇನೆ.
ಆದರೆ, ಇಷ್ಟು ವರ್ಷಗಳಿಂದ ಕಾಂಗ್ರೆಸ್‌ನಲ್ಲಿರುವ ಇವರು ಯಾಕೆ ಶಾಸಕರ ವಿರುದ್ಧ ಮಾತನಾಡುತ್ತಿಲ್ಲ. ಇವರು ಯಾರೂ ಪಕ್ಷದ ಪರವಾಗಿ ಕೆಲಸ ಮಾಡುತ್ತಿಲ್ಲ. ಜೆಡಿಎಸ್ ಪಕ್ಷದವರಿಂದ ₹15 ಕೋಟಿ ಪಡೆದು ಕಾಂಗ್ರೆಸ್ ಪಕ್ಷ ಸೋಲಿಸಲು ಕೆಲ ಶಕುನಿಗಳು ತೊಂದರೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಅವರು ಹಣ ಪಡೆದಿಲ್ಲ ಎಂದಾದರೆ ಆಂಜನೇಯನ ಮೇಲೆ ಆಣೆ ಮಾಡಲಿ. ಇದು ಸುಳ್ಳು ಎಂದಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.