ADVERTISEMENT

ಈ ಬಾರಿ ಹಂಪಿ ಉತ್ಸವ ಇಲ್ಲ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2018, 10:40 IST
Last Updated 27 ನವೆಂಬರ್ 2018, 10:40 IST
ಹಂಪಿಯ ವೈಮಾನಿಕ ನೋಟ ಪ್ರಜಾವಾಣಿ ಚಿತ್ರ/ಬಿ. ಬಾಬುಕುಮಾರ
ಹಂಪಿಯ ವೈಮಾನಿಕ ನೋಟ ಪ್ರಜಾವಾಣಿ ಚಿತ್ರ/ಬಿ. ಬಾಬುಕುಮಾರ   

ಬೆಂಗಳೂರು: ‘ಬಳ್ಳಾರಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇರುವುದರಿಂದ ಈ ವರ್ಷ ಹಂಪಿ ಉತ್ಸವ ನಡೆಸದಿರಲು ಸರ್ಕಾರ ನಿರ್ಧರಿಸಿದೆ’ ಎಂದು ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಮುಖ್ಯಮಂತ್ರಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯ ನಂತರ ಮಾತನಾಡಿದ ಅವರು,‘ಕಳೆದ ವರ್ಷ ₹15 ಕೋಟಿ ಖರ್ಚು ಮಾಡಿ ಉತ್ಸವ ನಡೆಸಲಾಗಿತ್ತು. ಉತ್ಸವಕ್ಕೆ ತಿಂಗಳ ಸಿದ್ಧತೆ ಬೇಕಾಗಿರುತ್ತದೆ. ಕಾರಣಾಂತರಗಳಿಂದ ಸಿದ್ಧತೆಯೂ ನಡೆದಿಲ್ಲ. ಹೀಗಾಗಿ ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಉತ್ಸವ ನಡೆಸದಿರಲು ನಿರ್ಧರಿಸಿದ್ದೇವೆ’ ಎಂದರು.

ಪ್ರತಿ ವರ್ಷ ನವೆಂಬರ್‌ 3ರಿಂದ 5ರವರೆಗೆ ಉತ್ಸವ ನಡೆಯುತ್ತಿತ್ತು. ಆದರೆ, ಈ ಬಾರಿ ನ.3ರಂದೇ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆಯ ಇದ್ದಿದ್ದರಿಂದ ಉತ್ಸವವನ್ನು ಮುಂದೂಡಲಾಗಿತ್ತು. ಆ ನಂತರಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ಅವರು ‘ಜಿಲ್ಲೆಯ ಏಳು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವಾಗ ಹಂಪಿ ಉತ್ಸವ ನಡೆಸಬೇಕೇ ಅಥವಾ ಬೇಡವೇ ಎನ್ನುವುದರ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ನಂತರ ಸರ್ಕಾರದ ಮಟ್ಟದಲ್ಲಿಯೂ ಚರ್ಚಿಸಿ, ತೀರ್ಮಾನಕ್ಕೆ ಬರಲಾಗುವುದು’ ಎಂದು ಹೇಳಿದ್ದರು.

ADVERTISEMENT

‘ಕಳೆದ ವರ್ಷವೂಜಿಲ್ಲೆಯಲ್ಲಿ ಬರ ಬಿದ್ದಿತ್ತು. ಆದರೂ, ಹಂಪಿ ಉತ್ಸವ ನಡೆಸಲಾಗಿತ್ತು. ಈ ಸಲ ಬರದ ನೆಪವೊಡ್ಡಿ ಕಾರ್ಯಕ್ರಮ ರದ್ದುಗೊಳಿಸಬಾರದು’ ಎಂದು ಕಲಾವಿದರು ವಿರೋಧ ವ್ಯಕ್ತಪಡಿಸಿದ್ದರು.

ಅಂಬರೀಷ್‌ ಸ್ಮಾರಕ:‘ಅಂಬರೀಷ್ ಸ್ಮಾರಕ ನಿರ್ಮಾಣ ಮಾಡಬೇಕು.ವಿಷ್ಣು ಸ್ಮಾರಕವನ್ನು ಕಂಠೀರವ ಸ್ಟುಡಿಯೋಗೆ ಸ್ಥಳಾಂತರಿಸುವ ಬಗ್ಗೆ ಮಾತನಾಡಲು ನಾನು ಅಧಿಕೃತ ವ್ಯಕ್ತಿಯಲ್ಲ.ಅಂಬರೀಷ್ ಅಂತ್ಯ ಸಂಸ್ಕಾರದ ವೇಳೆ ರಾಜ್ಯದ ಜನ ಸಂಯಮ ತೋರಿಸಿದರು.ಪೊಲೀಸ್ ಮತ್ತು ಅಧಿಕಾರಿಗಳು ದಕ್ಷತೆ ತೋರಿಸಿದ್ದರಿಂದ ಯಾವುದೇ ಅನಾಹುತವಾಗಲಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.