ADVERTISEMENT

ವಿಳಂಬ ತಪ್ಪಿಸಲು ಟೆಂಡರ್‌ಗೂ ವೇಳಾಪಟ್ಟಿ ನಿಗದಿ

ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಆಯುಕ್ತ ಭರವಸೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 19:24 IST
Last Updated 18 ಸೆಪ್ಟೆಂಬರ್ 2019, 19:24 IST
   

ಬೆಂಗಳೂರು: ‘ಪಾಲಿಕೆಯಲ್ಲಿ ಟೆಂಡರ್‌ ಪ್ರಕ್ರಿಯೆ ಕಾಲಮಿತಿಯೊಳಗೆ ನಡೆಯುತ್ತಿಲ್ಲ. ಈ ಪ್ರಕ್ರಿಯೆ ವಿಳಂಬವಾಗುವುದನ್ನು ತಪ್ಪಿಸಲು ಕಾರ್ಯಕ್ರಮಗಳ ವೇಳಾಪಟ್ಟಿ ನಿಗದಿ ಪಡಿಸಿ ಅದರಂತೆ ಟೆಂಡರ್‌ ಕರೆದು ಅನುಷ್ಠಾನಗೊಳಿಸಬೇಕಿದೆ’ ಎಂದು ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಹೇಳಿದರು.

ಕಲ್ಯಾಣ ಕಾರ್ಯಕ್ರಮಗಳು ವಿಳಂಬವಾಗುವ ಬಗ್ಗೆ ಕೌನ್ಸಿಲ್‌ ಸಭೆಯಲ್ಲಿ ಬುಧವಾರ ಆಕ್ಷೇಪ ವ್ಯಕ್ತವಾಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ವಿದ್ಯಾರ್ಥಿವೇತನದಂತಹ ಸೌಲಭ್ಯವನ್ನೂ ಒಂದು ವರ್ಷ ತಡವಾಗಿ ನೀಡುವುದನ್ನು ಒಪ್ಪಲಾಗದು. ಸರಿಯಾಗಿ ಯೋಜನೆ ರೂಪಿಸದ ಕಾರಣ ಕಲ್ಯಾಣ ಕಾರ್ಯಕ್ರಮಗಳು ವಿಳಂಬವಾಗುತ್ತಿವೆ. ಈ ಲೋಪಗಳನ್ನು ಸರಿಪಡಿಸಿಕೊಳ್ಳುತ್ತೇವೆ. 2017–18 ಹಾಗೂ 2018–19ನೇ ಸಾಲಿನ ಕಲ್ಯಾಣ ಕಾರ್ಯಕ್ರಮಗಳನ್ನು ಆದಷ್ಟು ಬೇಗ ಫಲಾನುಭವಿಗಳಿಗೆ ತಲುಪಿಸುತೇವೆ’ ಎಂದು ಭರವಸೆ ನೀಡಿದರು.

‘ಬಿಬಿಎಂಪಿ ವಲಯವಾರು ಬಜೆಟ್‌ಗಳನ್ನು ರೂಪಿಸಿದರೆ ವಿಳಂಬವನ್ನು ತಪ್ಪಿಸಬಹುದು. ಬಹುತೇಕ ಆರ್ಥಿಕ ವಿಚಾರಗಳ ಬಗ್ಗೆ ಸ್ಥಳೀಯ ಮಟ್ಟದಲ್ಲೇ ನಿರ್ಧಾರ ಕೈಗೊಳ್ಳುವಂತಾಗಬೇಕು. ಸರ್ಕಾರವೂ ಅಧಿಕಾರ ವಿಕೇಂದ್ರೀಕರಣಕ್ಕೆ ಕ್ರಮ ವಹಿಸಿದೆ. ಈ ಹಿಂದೆ ಎಲ್ಲ ಕಡತಗಳಿಗೂ ಆಯುಕ್ತರೇ ಸಹಿ ಹಾಕುವ ಸ್ಥಿತಿ ಇತ್ತು. ಈಗ ವಿಶೇಷ/ ಹೆಚ್ಚುವರಿ ಆಯುಕ್ತರಿಗೆ ತಲಾ ಎರಡು ವಲಯಗಳ ಹೊಣೆ ವಹಿಸಲಾಗಿದೆ. ಈ ಕುರಿತು 10 ದಿನಗಳ ಒಳಗೆ ಆದೇಶ ಮಾಡುತ್ತೇನೆ’ ಎಂದು ತಿಳಿಸಿದರು.

ADVERTISEMENT

‘ತ್ವರಿತ ಕಾಮಗಾರಿ ಕೆಆರ್‌ಡಿಸಿಎಲ್‌ಗೆ ವಹಿಸಿ’

ಮೇಯರ್‌ ಹಾಗೂ ಉಪಮೇಯರ್‌ ಅನುದಾನದಡಿ ಕೈಗೆತ್ತಿಕೊಳ್ಳುವ ತ್ವರಿತ ಕಾಮಗಾರಿಗಳನ್ನು ಕೆಆರ್‌ಡಿಸಿಎಲ್‌ ಮೂಲಕ ಅನುಷ್ಠಾನಗೊಳಿಸಲು ಅಧಿಕಾರಿಗಳು ಸಹಕರಿಸುತ್ತಿಲ್ಲ ಎಂದು ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಆಯುಕ್ತರು, ‘ಟೆಂಡರ್‌ ಕರೆಯುವುದು ಪಾರದರ್ಶಕ ವಿಧಾನ. ಕೆಆರ್‌ಡಿಎಲ್‌ಗೆ ವಹಿಸುವ ಕೆಲವು ಕಡತಗಳನ್ನು ತಡೆಹಿಡಿಯುವಂತೆ ನಾನೇ ಸೂಚಿಸಿದ್ದೆ. ತ್ವರಿತ ಕಾಮಗಾರಿಗಳನ್ನು ಕೆಆರ್‌ಡಿಎಲ್‌ಗೆ ವಹಿಸಲು ಕ್ರಮಕೈಗೊಳ್ಳುತ್ತೇನೆ’ ಎಂ ಭರವಸೆ ನೀಡಿದರು.

‘ಕಲ್ಯಾಣ ಕಾರ್ಯಕ್ರಮಗಳ ಕಡತಗಳನ್ನು ಕೇಂದ್ರ ಕಚೇರಿ ಅಧಿಕಾರಿಗಳು ತಿಂಗಳುಗಟ್ಟಲೆ ಇಟ್ಟುಕೊಳ್ಳುತ್ತಾರೆ. ಹಾಗಾಗಿ ಒಂಟಿ ಮನೆ, ಅಂಗವಿಕಲರ ಬೈಸಿಕಲ್‌, ಹೊಲಿಗೆ ಯಂತ್ರ, ಆಟೋರಿಕ್ಷಾ, ತಳ್ಳು ಗಾಡಿ, ಲ್ಯಾಪ್‌ಟಾಪ್‌ಗಳನ್ನು ಫಲಾನುಭವಿಗಳಿಗೆ ಸಕಾಲದಲ್ಲಿ ವಿತರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಪಕ್ಷಭೇದ ಮರೆತು ಸದಸ್ಯರು ಆರೋಪಿಸಿದರು. ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷೆ ಪಿ.ಸೌಮ್ಯಾ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದರು.

***

ಕಲ್ಯಾಣ ಕಾರ್ಯಕ್ರಮ ವಿಳಂಬ ಸಹಿಸಲಾಗದು. ಈ ವಿಳಂಬ ತಪ್ಪಿಸಲು ಆಯುಕ್ತರು ಆಯಾ ವಲಯದ ಜಂಟಿ ಆಯುಕ್ತರು ಹಾಗೂ ಕಲ್ಯಾಣ ವಿಭಾಗದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಕ್ರಮಕೈಗೊಳ್ಳಬೇಕು
- ಗಂಗಾಂಬಿಕೆ, ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.