ADVERTISEMENT

ಯಲಹಂಕ | ಸುರಕ್ಷತಾ ನಿಯಮ ಪಾಲಿಸದೆ ಟೋಲ್‌ ಸಂಗ್ರಹ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಮೇ 2025, 16:31 IST
Last Updated 30 ಮೇ 2025, 16:31 IST
ಟೋಲ್‌ ನಿರ್ವಾಹಕರು ರಸ್ತೆ ನಿಯಮಗಳನ್ನು ಪಾಲಿಸದೆ ವಾಹನಸವಾರರು ಮತ್ತು ಪಾದಚಾರಿಗಳ ಸಾವು-ನೋವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ, ಶಾಸಕ ಎಸ್‌.ಆರ್‌.ವಿಶ್ವನಾಥ್‌ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಟೋಲ್‌ ಬಳಿ ಪ್ರತಿಭಟನೆ ನಡೆಸಿದರು.
ಟೋಲ್‌ ನಿರ್ವಾಹಕರು ರಸ್ತೆ ನಿಯಮಗಳನ್ನು ಪಾಲಿಸದೆ ವಾಹನಸವಾರರು ಮತ್ತು ಪಾದಚಾರಿಗಳ ಸಾವು-ನೋವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ, ಶಾಸಕ ಎಸ್‌.ಆರ್‌.ವಿಶ್ವನಾಥ್‌ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಟೋಲ್‌ ಬಳಿ ಪ್ರತಿಭಟನೆ ನಡೆಸಿದರು.   

ಯಲಹಂಕ: ಯಲಹಂಕ-ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಕಡತನಮಲೆ ಗೇಟ್‌ ಸಮೀಪದಲ್ಲಿರುವ ಟೋಲ್‌ ನಿರ್ವಾಹಕರು, ರಸ್ತೆ ನಿಯಮಗಳನ್ನು ಪಾಲಿಸದೆ ವಾಹನಸವಾರರು ಮತ್ತು ಪಾದಚಾರಿಗಳ ಸಾವು-ನೋವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ, ಶಾಸಕ ಎಸ್‌.ಆರ್‌.ವಿಶ್ವನಾಥ್‌ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಟೋಲ್‌ ಬಳಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕ ಎಸ್‌.ಆರ್‌.ವಿಶ್ವನಾಥ್‌, ಟೋಲ್‌ ನಿರ್ವಾಹಕರು ರಸ್ತೆ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸದ ಪರಿಣಾಮ, ಈ ರಸ್ತೆಯಲ್ಲಿ ಸಂಚರಿಸುವ ಹಲವು ಮಂದಿ ವಾಹನಸವಾರರು ಹಾಗೂ ಪಾದಚಾರಿಗಳು ಸಾವು-ನೋವುಗಳನ್ನು ಅನುಭವಿಸುತ್ತಿದ್ದಾರೆ. ಅವೈಜ್ಞಾನಿಕವಾಗಿ ಡಿವೈಡರ್‌ ಮತ್ತು ಯು-ಟರ್ನ್‌ಗಳನ್ನು ಅಳವಡಿಸಿದ್ದು, ಪಾದಚಾರಿ ಮಾರ್ಗದ ಮೇಲೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶನೀಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.

ರಸ್ತೆಗಾಗಿ ಭೂಮಿ ನೀಡಿದ ರೈತರಿಗೆ ಐದು ವರ್ಷಕಳೆದರೂ ಸೂಕ್ತಪರಿಹಾರ ನೀಡಿಲ್ಲ. ಟೋಲ್‌ ಸಮೀಪದಲ್ಲಿ ಶೌಚಾಲಯ, ವಿದ್ಯುತ್‌ದೀಪ, ಸ್ವಚ್ಛತೆ ಸೇರಿ ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ. ಅಪಘಾತಗಳಾದಾಗ ಗಾಯಾಳುಗಳನ್ನು ಸಾಗಿಸಲು ಆಂಬುಲೆನ್ಸ್‌ ಮತ್ತು ಟೋಯಿಂಗ್‌ ವಾಹನದ ಸೌಲಭ್ಯಗಳಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ ನಂತರವಷ್ಟೇ ಟೋಲ್‌ ಸಂಗ್ರಹ ಮಡಬೇಕೆಂದು ಹಲವು ಬಾರಿ ಸೂಚಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸದೆ ಟೋಲ್‌ ಸಂಗ್ರಹ ಮಾಡಬಾರದು ಎಂದು ಆಗ್ರಹಿಸಿದರು.

ADVERTISEMENT

ಅರಕೆರೆ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್‌.ತಿಮ್ಮೇಗೌಡ ಮಾತನಾಡಿ, ಟೋಲ್‌ ಸುತ್ತಮುತ್ತಲ ರೈತರು ಮತ್ತು ನಾಗರಿಕರ ವಾಹನಗಳನ್ನು ಉಚಿತವಾಗಿ ಬಿಡಲಾಗುವುದೆಂದು ಆರಂಭದಲ್ಲಿ ಭರವಸೆ ನೀಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಅದನ್ನು ಸ್ಥಗಿತಗೊಳಿಸಿ, ಟೋಲ್‌ ಸಂಗ್ರಹಿಸಲಾಗುತ್ತಿದೆ. ಇದರಿಂದ ಕೃಷಿ ಮತ್ತಿತರ ಕೆಲಸಗಳಿಗಾಗಿ ಈ ಭಾಗದಲ್ಲಿ ಸಂಚರಿಸಬೇಕಾಗಿರುವ ರೈತರಿಗೆ ತೊಂದರೆಯಾಗುತ್ತಿದೆ. ಸಮಸ್ಯೆಗಳನ್ನು ನಿವಾರಿಸಬೇಕೆಂದು ಕೆಆರ್‌ಡಿಎಲ್‌ಗೆ ಮನವಿಪತ್ರ ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಹದಿನೈದು ದಿನಗಳೊಳಗಾಗಿ ಸಮಸ್ಯೆ ಬಗೆಹರಿಸದಿದ್ದರೆ ಇಲ್ಲಿ ಸಂಭವಿಸುವ ಅಪಘಾತಗಳಿಗೆ ಟೋಲ್‌ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯವರೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್‌.ಎನ್‌.ರಾಜಣ್ಣ, ಚೊಕ್ಕನಹಳ್ಳಿ ವೆಂಕಟೇಶ್‌, ಡಿ.ಜಿ.ಅಪ್ಪಯಣ್ಣ, ಅದ್ದೆ ವಿಶ್ವನಾಥಪುರ ಮಂಜುನಾಥ್‌, ಎಸ್‌.ಜಿ.ನರಸಿಂಹಮೂರ್ತಿ, ಮುನಿದಾಸಪ್ಪ, ಎಸ್‌.ಜಿ.ಪ್ರಶಾಂತ್‌ರೆಡ್ಡಿ, ಪವನ್‌ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.