ADVERTISEMENT

ಟೋಯಿಂಗ್ ವಾಹನಕ್ಕೆ ಜನರ ಮುತ್ತಿಗೆ

ಚಾಲಕ ಮದ್ಯಪಾನ ಮಾಡಿದ್ದ ಆರೋಪ l ಸ್ಥಳಕ್ಕೆ ಡಿಸಿಪಿ, ಎಸಿಪಿ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 20:31 IST
Last Updated 21 ಸೆಪ್ಟೆಂಬರ್ 2019, 20:31 IST
ಟೋಯಿಂಗ್ ವಾಹನದ ಚಾಲಕನನ್ನು ತಪಾಸಣೆಗೆ ಒಳಪಡಿಸಿದ ಇನ್‌ಸ್ಪೆಕ್ಟರ್
ಟೋಯಿಂಗ್ ವಾಹನದ ಚಾಲಕನನ್ನು ತಪಾಸಣೆಗೆ ಒಳಪಡಿಸಿದ ಇನ್‌ಸ್ಪೆಕ್ಟರ್   

ಬೆಂಗಳೂರು: ‘ಟೋಯಿಂಗ್ ವಾಹನದ ಚಾಲಕ ಪಾನಮತ್ತನಾಗಿದ್ದಾನೆ’ ಎಂದು ಆರೋಪಿಸಿ ಕೆಲವರು ವಾಹನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ರಾಜಾಜಿನಗರದಲ್ಲಿ ಶನಿವಾರ ನಡೆದಿದೆ.

ಪ್ರತಿಭಟನೆ ವೇಳೆಯಲ್ಲೇ ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಸಹ ನಡೆದಿದೆ. ತಳ್ಳಾಟವೂ ಉಂಟಾಗಿ ಕೆಲವರು ಗಾಯಗೊಂಡಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಕೆಲವರ ವಿರುದ್ಧ ಸಂಚಾರ ಠಾಣೆ ಪೊಲೀಸರು ರಾಜಾಜಿನಗರದ ಠಾಣೆಗೆ ದೂರು ನೀಡಿದ್ದಾರೆ.

‘ಸಂಚಾರ ಪೊಲೀಸರು ಎರಡು ಪ್ರತ್ಯೇಕ ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾರದ್ದು ತಪ್ಪು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್ ಹೇಳಿದರು.

ADVERTISEMENT

ಆಗಿದ್ದೇನು?: ‘ಎಎಸ್‌ಐ ರಂಗಯ್ಯ ಹಾಗೂ ಸಿಬ್ಬಂದಿ, ಟೋಯಿಂಗ್ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯ ಟಿವಿಎಸ್ ಶೋರೂಂ ಎದುರು ನಿಲುಗಡೆ ನಿಷೇಧ ಸ್ಥಳದಲ್ಲಿ ನಿಂತಿದ್ದ ದ್ವಿಚಕ್ರ ವಾಹನವನ್ನು ಟೋಯಿಂಗ್ ಮಾಡಿದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ಟೋಯಿಂಗ್ ವಾಹನ ಬಂದಿದ್ದನ್ನು ಗಮನಿಸಿ ಸ್ಥಳಕ್ಕೆ ಬಂದಿದ್ದ ಚಾಲಕರೊಬ್ಬರು, ‘ಹಣ ಪಾವತಿ ಮಾಡುತ್ತೇನೆ. ಇಲ್ಲಿಯೇ ವಾಹನ ಕೊಟ್ಟು ಹೋಗಿ’ ಎಂದು ವಿನಂತಿಸಿದ್ದರು. ಅದಕ್ಕೆ ವಾಹನದಲ್ಲಿದ್ದ ಸಿಬ್ಬಂದಿ ಒಪ್ಪಿರಲಿಲ್ಲ. ಅಷ್ಟರಲ್ಲೇ ಕೆಲ ಸಾರ್ವಜನಿಕರು ಸ್ಥಳದಲ್ಲಿ ಸೇರಿದ್ದರು. ಟೋಯಿಂಗ್ ವಾಹನದ ಚಾಲಕ ಪಾನಮತ್ತರಾದಂತೆ ವರ್ತಿಸುತ್ತಿದ್ದನ್ನು ಕಂಡು, ಆತನನ್ನು ತಪಾಸಣೆಗೆ ಒಳಪಡಿಸಲು ಆಗ್ರಹಿಸಿದರು.

‘ವಾಹನವನ್ನು ಸುತ್ತುವರೆದು ಘೋಷಣೆ ಕೂಗಿದರು. ಅಷ್ಟರಲ್ಲೇ ಸ್ಥಳಕ್ಕೆ ಬಂದ ರಾಜಾಜಿನಗರ ಠಾಣೆ ಇನ್‌ಸ್ಪೆಕ್ಟರ್‌, ಚಾಲಕನನ್ನು ತಪಾಸಣೆ ನಡೆಸಿದರು. ಯಾವುದೇ ಮದ್ಯದ ಅಂಶ ಕಂಡುಬರಲಿಲ್ಲ. ಅಷ್ಟಕ್ಕೂ ಸುಮ್ಮನಾಗದ ಜನ, ಆತನನ್ನು ಬಂಧಿಸಬೇಕೆಂದು ಪಟ್ಟು ಹಿಡಿದರು. ಡಿಸಿಪಿ ಸೌಮ್ಯಲತಾ ಅವರೇ ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘100ಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿದ್ದರು. ತಳ್ಳಾಟದಲ್ಲಿ ಎಎಸ್‌ಐ ಒಬ್ಬರ ಕೈಗೆ ಗಾಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.

**

ಐವರನ್ನು ವಶಕ್ಕೆ ಪಡೆದ ಪೊಲೀಸರು

‘ಚಾಲಕ ಪಾನಮತ್ತರಾಗಿಲ್ಲ’ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಂತೆ ಕೆಲ ಸಾರ್ವಜನಿಕರು, ಜೋರಾಗಿ ಘೋಷಣೆ ಕೂಗಲಾರಂಭಿಸಿದ್ದರು. ಇದೇ ವೇಳೆ ರಾಜಾಜಿನಗರ ಪೊಲೀಸರು, ಚಾಲಕ ಯಶವಂತರಾವ್‌ ಸೇರಿ ಐವರನ್ನು ವಶಕ್ಕೆ ಪಡೆದು ಹೊಯ್ಸಳ ವಾಹನದಲ್ಲಿ ಠಾಣೆಗೆ ಕರೆದೊಯ್ದರು. ಪೊಲೀಸರ ಈ ವರ್ತನೆಯನ್ನು ಸಾರ್ವಜನಿಕರು ಪ್ರತಿಭಟಿಸಿದರು.

‘ಪೊಲೀಸರ ದಬ್ಬಾಳಿಕೆ’

‘ಟೋಯಿಂಗ್ ವಾಹನದ ಚಾಲಕ ಪಾನಮತ್ತನಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರು ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸಿದರು.

‘ಜನರ ರಕ್ಷಣೆಯೇ ಕರ್ತವ್ಯವೆನ್ನುವ ಪೊಲೀಸರು ಈ ರೀತಿ ವರ್ತಿಸಿರುವುದು ನಾಚಿಕೆಗೇಡಿನ ಸಂಗತಿ. ತಪ್ಪಿತಸ್ಥ ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.