ಬೆಂಗಳೂರು: ‘ಸಮಾಜದ ಅಂಚಿನ ಸಮುದಾಯಗಳು ಅವನತಿಯ ಹಾದಿಯಲ್ಲಿವೆ. ಅವುಗಳ ಕುಲಕಸುಬುಗಳು ಮತ್ತು ಪಾರಂಪರಿಕ ಕಲೆಗಳು ಕಣ್ಮರೆಯಾಗುತ್ತಿವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.
ನಗರದ ರಾಜಾಜಿನಗರದ ಶಿವಶಕ್ತಿ ನೃತ್ಯ ಶಾಲೆಯ ರಜತ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಈಚಿನ ದಶಕಗಳಲ್ಲಿ ಜಗತ್ತಿನಾದ್ಯಂತ ಸಾವಿರಾರು ಸಣ್ಣ– ಪುಟ್ಟ ಭಾಷೆಗಳು ಸಂಪೂರ್ಣವಾಗಿ ಇಲ್ಲವಾಗಿವೆ. ಭಾಷೆಗಳ ಜತೆಗೆ ಆ ಜನ ಸಮುದಾಯಗಳ ಪಾರಂಪರಿಕ ಕಲೆಗಳೂ ನಶಿಸಿಹೋಗುತ್ತವೆ. ಮುಂದಿನ ಐವತ್ತು ವರ್ಷಗಳಲ್ಲಿ ಜಗತ್ತಿನ ಎಲ್ಲ ಜನರ ಮೇಲೆ ಕೆಲವೇ ಭಾಷೆಗಳು ಅಧಿಪತ್ಯ ಸಾಧಿಸುವ ಅಪಾಯವಿದೆ’ ಎಂದರು.
‘ಈ ಅಪಾಯಗಳಿಂದ ಪಾರಂಪರಿಕ ಕಲೆ ಮತ್ತು ಸಂಸ್ಕೃತಿಗಳನ್ನು ರಕ್ಷಿಸಲು ಪರಿಣಾಮಕಾರಿ ಪ್ರಯತ್ನ ಅಗತ್ಯ. ಆ ಯತ್ನದ ಭಾಗವಾಗಿ ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಮುಂತಾದ ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದರು.
ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಶಾಸಕ ಸಿ.ಎನ್.ಅಶ್ವತ್ಥನಾರಾಯಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.