ಬೆಂಗಳೂರು: ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಜಾತ್ರೆ ಹಾಗೂ ರಥೋತ್ಸವದ ಅಂಗವಾಗಿ ಇದೇ 10 ರಿಂದ 12ರವರೆಗೆ ಕಿಂಕೊ ಜಂಕ್ಷನ್‌ನಿಂದ ಹೊಸಗುಡ್ಡದಹಳ್ಳಿ ಜಂಕ್ಷನ್‌ವರೆಗೆ ವಾಹನ ಸಂಚಾರವನ್ನುತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
‘ಶ್ರೀರಾಮ ವೇಣುಗೋಪಾಲಸ್ವಾಮಿ ರಥೋತ್ಸವ ವೀಕ್ಷಿಸಲು ಲಕ್ಷಾಂತರ ಮಂದಿ ಭಕ್ತರು ಬರುವ ನಿರೀಕ್ಷೆ ಇದೆ. ರಸ್ತೆ ಕಿರಿದಾಗಿರುವುದರಿಂದ ಭಕ್ತರ ಓಡಾಟಕ್ಕೂ ತೊಂದರೆಯಾಗಲಿದೆ. ಹೀಗಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿದ್ದು, ಪರ್ಯಾಯ ಮಾರ್ಗವನ್ನೂ ಸೂಚಿಸಲಾಗಿದೆ’ ಎಂದು ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
‘ಸಿರ್ಸಿ ವೃತ್ತ ಮತ್ತು ಕೆ.ಆರ್.ಮಾರುಕಟ್ಟೆಯ ಮೇಲ್ಸೇತುವೆ ಕಡೆಯಿಂದ ಬರುವ ವಾಹನಗಳು ಹೊಸಗುಡ್ಡದಹಳ್ಳಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು, ಟಿಂಬರ್ ಯಾರ್ಡ್ ಬಡಾವಣೆ ಮೂಲಕ ಮುನೇಶ್ವರ ಬ್ಲಾಕ್ 50 ಅಡಿ ರಸ್ತೆಯಲ್ಲಿ ಸಂಚರಿಸಿ, ಹೊಸಕೆರೆಹಳ್ಳಿ ರಸ್ತೆ ಮಾರ್ಗವಾಗಿ ವೀರಭದ್ರನಗರ ಜಂಕ್ಷನ್ ಮುಖಾಂತರ ಹೊರ ವರ್ತುಲ ರಸ್ತೆಗೆ ಕೂಡಿಕೊಂಡು ಅಲ್ಲಿಂದ ಮೈಸೂರು ರಸ್ತೆಗೆ ಸಂಚರಿಸಬೇಕು’ ಎಂದು ಪ್ರಕಟಣೆ ತಿಳಿಸಿದೆ.
‘ಮೈಸೂರು ಕಡೆಯಿಂದ ಬರುವ ವಾಹನಗಳು ಕಿಂಕೊ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ಮೇಲ್ಸೇತುವೆಯಲ್ಲಿ ಸಂಚರಿಸಿ, ಬಾಪೂಜಿನಗರ ಜಂಕ್ಷನ್ ಬಳಿ ಮೈಸೂರು ರಸ್ತೆಗೆ ಸೇರ್ಪಡೆಯಾಗಿನಗರ ಪ್ರವೇಶಿಸಬಹುದು’ ಎಂದು ಸಲಹೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.