ADVERTISEMENT

ಪೊಲೀಸರ ಅನುಕೂಲಕ್ಕೆ ದಂಡಾಸ್ತ್ರ

ವರ್ಷಗಟ್ಟಲೇ ಕಾದು ದಂಡ ವಿಧಿಸುವ ಪೊಲೀಸರು l ದಂಡ ಸಂಗ್ರಹಕ್ಕೆ ಕಾಲಮಿತಿ ನಿಗದಿಪಡಿಸಲು ಜನರ ಒತ್ತಾಯ

ಸಂತೋಷ ಜಿಗಳಿಕೊಪ್ಪ
Published 6 ಆಗಸ್ಟ್ 2021, 21:55 IST
Last Updated 6 ಆಗಸ್ಟ್ 2021, 21:55 IST
ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಬೈಕ್‌ ತಡೆಯಲು ಟ್ರಾಫಿಕ್ ಪೊಲೀಸರು ಪ್ರಯತ್ನಿಸಿದರು– ಸಂಗ್ರಹ ಚಿತ್ರ
ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಬೈಕ್‌ ತಡೆಯಲು ಟ್ರಾಫಿಕ್ ಪೊಲೀಸರು ಪ್ರಯತ್ನಿಸಿದರು– ಸಂಗ್ರಹ ಚಿತ್ರ   

ಬೆಂಗಳೂರು: ದಂಡ ಸಂಗ್ರಹ ಪ್ರಕ್ರಿಯೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡಿರುವ ಪೊಲೀಸರು, ಕಾನೂನು ಮೀರಿ ತಮ್ಮಿಷ್ಟದಂತೆ ವರ್ತಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ವರ್ಷಗಟ್ಟಲೇ ಕಾದು ಜನರಿಂದ ದಂಡ ಸಂಗ್ರಹಿಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ನಿಯಮ ಉಲ್ಲಂಘನೆ ಪತ್ತೆಗಷ್ಟೇ ಆಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿರುವ ಪೊಲೀಸರು, ದಂಡ ಸಂಗ್ರಹ ಕೆಲಸಕ್ಕೆ ಮಾತ್ರ ಚುರುಕು ಮುಟ್ಟಿಸಿಲ್ಲ. ಯಾವುದೋ ವರ್ಷದಲ್ಲಾದ ನಿಯಮ ಉಲ್ಲಂಘನೆ ದಂಡವನ್ನು ಮತ್ತ್ಯಾವುದೋ ವರ್ಷದಲ್ಲಿ ಸಂಗ್ರಹಿಸುತ್ತಿರುವ ಪೊಲೀಸರು, ದಂಡ ಸಂಗ್ರಹದಲ್ಲೂ ಕಾಲಮಿತಿ ಪಾಲಿಸುತ್ತಿಲ್ಲ.

ಸಿಬ್ಬಂದಿ ಕೊರತೆ ಹಾಗೂ ಸೌಕರ್ಯಗಳ ಅಲಭ್ಯತೆ ನೆಪ ಹೇಳುವ ಪೊಲೀಸರು, ತಮ್ಮ ಕೆಲಸದ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಜನರ ಮೇಲೆ ದಂಡಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಮೊದಲ ಬಾರಿ ಸಂಚಾರ ನಿಯಮ ಉಲ್ಲಂಘಿಸುವ ವ್ಯಕ್ತಿಯನ್ನು ಪತ್ತೆ ಮಾಡಿ ದಂಡ ಸಂಗ್ರಹಿಸುವ ಕೆಲಸಕ್ಕೆ ಒತ್ತು ನೀಡಬೇಕಾದ ಪೊಲೀಸರು, ಅದೇ ವ್ಯಕ್ತಿ ಹಲವು ಬಾರಿ ನಿಯಮ ಉಲ್ಲಂಘಿಸುವವರೆಗೂ ಕಾದು ದಂಡ ಸಂಗ್ರಹಿಸುತ್ತಿದ್ದಾರೆ.

ADVERTISEMENT

ಕೆಲ ಪ್ರಕರಣಗಳಲ್ಲಿ ಐದಾರು ವರ್ಷಗಳ ಬಳಿಕ ಸಾರ್ವಜನಿಕರಿಂದ ಪೊಲೀಸರು ದಂಡ ಸಂಗ್ರಹಿಸಿದ್ದಾರೆ. ವಾಹನದ ಮೌಲ್ಯಕ್ಕಿಂತ ದಂಡ ಮೊತ್ತವೇ ಹೆಚ್ಚಾಗಿದ್ದರಿಂದ, ಅಂಥ ವಾಹನಗಳನ್ನು ಸಾರ್ವಜನಿಕರು
ಪೊಲೀಸರಿಗೇ ಕೊಟ್ಟು ಹೋಗಿರುವ ಪ್ರಕರಣಗಳೂ ನಡೆದಿವೆ.

ದಂಡ ಸಂಗ್ರಹ ತಡ ಮಾಡಿದ್ದರಿಂದ, ನೂರು ರೂಪಾಯಿ ಮೊತ್ತ ಸಾವಿರಾರು ರೂಪಾಯಿಗೆ ಬೆಳೆಯುತ್ತಿದೆ. ದಂಡದ ಮೊತ್ತ ಹೆಚ್ಚಾಗಲು ಕಾರಣವೇನು ? ಎಂಬುದನ್ನು ಹುಡುಕುತ್ತಾ ಹೋದರೆ, ಸಂಚಾರ ಪೊಲೀಸರ ವಿಳಂಬ ಧೋರಣೆ ಢಾಳಾಗಿ ಕಾಣಿಸುತ್ತದೆ.

ಬೆಳ್ಳಂದೂರಿನ ಖಾಸಗಿ ಕಂಪನಿ ಉದ್ಯೋಗಿ ಜಿ. ರವಿಕುಮಾರ್, ‘2017ರಲ್ಲಿ ಮಾರತ್ತಹಳ್ಳಿ ರಸ್ತೆಯ ಬದಿ ಬೈಕ್‌ ನಿಲ್ಲಿಸಿದ್ದೆ. ಅದೇ ರಸ್ತೆಯ ಕೊನೆಯಲ್ಲಿ ‘ನೋ ಪಾರ್ಕಿಂಗ್’ ಫಲಕವಿತ್ತಂತೆ. ಅದನ್ನು ನಾನು ಗಮನಿಸಿರಲಿಲ್ಲ. ನಿಯಮ ಉಲ್ಲಂಘನೆ ಆಗಿದೆ ಎಂಬ ಅರಿವು ನನಗಿರಲಿಲ್ಲ. ನನ್ನದು ತಪ್ಪು ಎಂದು ಯಾರೊಬ್ಬರೂ ಹೇಳಿರಲಿಲ್ಲ. ಅದಾದ ನಂತರ ಅದೇ ಜಾಗದಲ್ಲೇ 10 ಬಾರಿ ಬೈಕ್‌ ನಿಲ್ಲಿಸಿದ್ದೆ’ ಎಂದರು.

‘2021ರ ಜೂನ್‌ನಲ್ಲಿ ಮಾರತ್ತಹಳ್ಳಿ ಬಳಿ ಪೊಲೀಸರು ನನ್ನ ಬೈಕ್ ಅಡ್ಡಗಟ್ಟಿದ್ದರು. ಉಪಕರಣದಲ್ಲಿ ನೋಂದಣಿ ಸಂಖ್ಯೆ ಪರಿಶೀಲಿಸಿ, 11 ಬಾರಿ ನಿಯಮ ಉಲ್ಲಂಘಿಸಿರುವುದಾಗಿ ಹೇಳಿದ್ದರು. ಅದನ್ನು ಕೇಳಿ ಆಘಾತವಾಯಿತು. ನಾಲ್ಕು ವರ್ಷಗಳಲ್ಲಿ 11 ಬಾರಿ ಒಂದೇ ಕಡೆ ಬೈಕ್ ನಿಲ್ಲಿಸಿದರೂ ಪೊಲೀಸರು ಏನು ಹೇಳಿಲ್ಲ. ಮನೆಗೆ ನೋಟಿಸ್ ಸಹ ಕಳುಹಿಸಿಲ್ಲ. ಈಗ ಏಕಾಏಕಿ ಬೈಕ್ ಅಡ್ಡಗಟ್ಟಿ ದಂಡ ತುಂಬಿ ಎಂದರೆ ಹೇಗೆ ತುಂಬುವುದು ಎಂದು ಪ್ರಶ್ನಿಸಿದ್ದೆ. ಅದಕ್ಕೆ ಉತ್ತರಿಸದ ಪೊಲೀಸರು, ಬೈಕ್ ಜಪ್ತಿ ಮಾಡುವ ಬೆದರಿಕೆ ಹಾಕಿದರು. ಅನಿವಾರ್ಯವಾಗಿ
ದಂಡ ಪಾವತಿಸಿದೆ’ ಎಂದು ರವಿಕುಮಾರ್ ತಿಳಿಸಿದರು.

‘ಮೊದಲ ಬಾರಿಯೇ ನನಗೆ ನೋಟಿಸ್ ನೀಡಿದ್ದರೆ ಅಥವಾ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್‌ ತಿಳಿಸಿದ್ದರೆ, ಎರಡನೇ ಬಾರಿ ಆ ಜಾಗದಲ್ಲಿ ಬೈಕ್ ನಿಲ್ಲಿಸುತ್ತಿರಲಿಲ್ಲ. ನೋಟಿಸ್‌ ಕೊಡದಿರುವುದು ಪೊಲೀಸರ ತಪ್ಪು. ಅದರಿಂದ ನಾನು ದುಬಾರಿ ದಂಡ ತೆರಬೇಕಾಯಿತು’ ಎಂದೂ ಬೇಸರ ವ್ಯಕ್ತಪಡಿಸಿದರು.

ಚಾಲಕರ ತಪ್ಪಿಗೆ ಮಾಲೀಕರಿಗೆ ದಂಡ: ‘ನನ್ನ ಕಾರು ಚಲಾಯಿಸಲು ಚಾಲಕನನ್ನು ನೇಮಿಸಿಕೊಂಡಿದ್ದೇನೆ. ಆತನೇ ಹಲವೆಡೆ ಕಾರು ತೆಗೆದುಕೊಂಡು ಹೋಗುತ್ತಾನೆ. ಹಲವು ಬಾರಿ ಆತ ನಿಯಮ ಉಲ್ಲಂಘಿಸಿದ್ದು, ಈ ಸಂಗತಿ ನನಗೆ ಗೊತ್ತಿರಲಿಲ್ಲ. ಮೂರು ವರ್ಷ ಬಿಟ್ಟು ಪೊಲೀಸರು, ₹25 ಸಾವಿರ ದಂಡದ ನೋಟಿಸ್ ನೀಡಿದಾಗಲೇ ತಿಳಿಯಿತು’ ಎಂದು ಚಾಮರಾಜಪೇಟೆ ವ್ಯಾಪಾರಿ ಭರತ್‌ ಹೇಳಿದರು.

‘ಚಾಲಕ ಮೊದಲ ಬಾರಿ ತಪ್ಪು ಮಾಡಿದಾಗಲೇ ನೋಟಿಸ್‌ ನೀಡಬೇಕಿತ್ತು. ಅವಾಗಲೇ ದಂಡ ತುಂಬಿ, ಚಾಲಕನಿಗೆ ಎಚ್ಚರಿಕೆ ನೀಡುತ್ತಿದ್ದೆ. ಮತ್ತೊಮ್ಮೆ ಆತ ತಪ್ಪು ಮಾಡುತ್ತಿರಲಿಲ್ಲ. ಮೂರು ವರ್ಷ ಬಿಟ್ಟು ನೋಟಿಸ್ ಕೊಟ್ಟರೆ ಏನು ಪ್ರಯೋಜನ. ಪೊಲೀಸರ ಉದ್ದೇಶ ಜಾಗೃತಿಯೋ ಅಥವಾ ಹೆಚ್ಚು ದಂಡ ವಸೂಲಿ ಮಾಡುವುದೋ’ ಎಂದು ವ್ಯವಸ್ಥೆ ಬಗ್ಗೆ ಪ್ರಶ್ನಿಸಿದರು.

ಬಸವನಗುಡಿಯ ನಿವಾಸಿ ಆರ್‌.ಕೆ. ರಾಮಕೃಷ್ಣ, ‘ಕಾಲಮಿತಿ ಅಳವಡಿಸಿಕೊಂಡು ದಂಡ ಸಂಗ್ರಹಿಸುವುದು ಪೊಲೀಸರ ಕರ್ತವ್ಯ. ಸಿಬ್ಬಂದಿ ಕೊರತೆ ನೆಪ ಹೇಳಿ ಮನಸ್ಸಿಗೆ ಬಂದ ರೀತಿಯಲ್ಲಿ ದಂಡ ಸಂಗ್ರಹ ಮಾಡುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಳೇ ಪ್ರಕರಣ ಹೆಸರಿನಲ್ಲೇ ಕಿರುಕುಳ: ಕೆಲ ಸಂಚಾರ ಪೊಲೀಸರು, ಹಳೇ ಪ್ರಕರಣಗಳ ದಂಡ ಸಂಗ್ರಹ ನೆಪದಲ್ಲಿ ನಡುರಸ್ತೆಯಲ್ಲಿ ವಾಹನ ಅಡ್ಡಗಟ್ಟಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಆರೋಪಗಳು ಇವೆ.

‘ನಿಯಮ ಉಲ್ಲಂಘಿಸಿದ್ದೇವೆ’ ಎಂಬುದೇ ಹಲವರಿಗೆ ಗೊತ್ತಾಗುತ್ತಿಲ್ಲ. ಮೊದಲ ಬಾರಿಯೇ ತಪ್ಪು ಗುರುತಿಸಿ ಹೇಳಬೇಕಾದ ಪೊಲೀಸರು, ‘ನೂರು ರೂಪಾಯಿ ಮೊತ್ತ ಸಾವಿರಾರು ರೂಪಾಯಿ ಆಗಲಿ’ ಎಂದು ಕಾಯುತ್ತಿರುವಂತೆ ಕಾಣುತ್ತಿದೆ. ಇದರಿಂದಲೇ ಬಹುತೇಕ ಕಡೆ ದಂಡ ಸಂಗ್ರಹ ಸಮಯದಲ್ಲಿ ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆಯುತ್ತಿದೆ.

‘ಕಚೇರಿ ಹಾಗೂ ಇತರೆ ಕೆಲಸಕ್ಕೆ ಹೋಗುವಾಗ ಸುಖಾಸುಮ್ಮನೇ ವಾಹನ ನಿಲ್ಲಿಸುವ ಪೊಲೀಸರು, ದಾಖಲೆ ಕೇಳುತ್ತಾರೆ. ಅವುಗಳನ್ನು ನೀಡಿದ ತಕ್ಷಣ ಹಳೇ ಪ್ರಕರಣಗಳಿವೆ ಎಂಬ ರಾಗ ಎಳೆಯುತ್ತಾರೆ. ಎರಡು– ಮೂರು ವರ್ಷಗಳ ಹಿಂದಿನ ಪ್ರಕರಣಗಳನ್ನು ಹೇಳಿ ದಂಡ ಸಂಗ್ರಹಿಸುತ್ತಾರೆ. ಅದನ್ನು ಪ್ರಶ್ನಿಸಿದರೆ, ಏರುಧ್ವನಿಯಲ್ಲಿ ಮಾತನಾಡಿ ಕಿರುಕುಳ ನೀಡುತ್ತಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಿಸುವುದಾಗಿ ಬೆದರಿಸುತ್ತಾರೆ’ ಎಂದು
ಹನುಮಂತನಗರದ ನಿವಾಸಿ ಯಶವಂತ್‌ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.