ADVERTISEMENT

₹ 44 ಸಾವಿರ ದಂಡ: ಪೊಲೀಸರಿಂದ ತಪ್ಪಿಸಿಕೊಂಡ ಸವಾರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 16:23 IST
Last Updated 24 ಫೆಬ್ರುವರಿ 2022, 16:23 IST

ಬೆಂಗಳೂರು: ಸಂಚಾರ ನಿಯಮಗಳನ್ನು 81 ಬಾರಿ ಉಲ್ಲಂಘಿಸಿದ್ದ ದ್ವಿಚಕ್ರ ವಾಹನ ಸವಾರರೊಬ್ಬರು, ತಮ್ಮನ್ನು ತಡೆದ ಪೊಲೀಸರ ವಿರುದ್ಧವೇ ಹರಿಹಾಯ್ದು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

‘ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ) ಸಂಚಾರ ಠಾಣೆ ಪೊಲೀಸರು ಗುರುವಾರ ಬೆಳಿಗ್ಗೆ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಇದೇ ವೇಳೆ ಸ್ಥಳಕ್ಕೆ ಬಂದಿದ್ದ ದ್ವಿಚಕ್ರ ವಾಹನವೊಂದನ್ನು ತಡೆದು ಪರಿಶೀಲಿಸಿದ್ದರು. ವಾಹನದ ಮೇಲೆ 81 ಪ್ರಕರಣವಿರುವುದು ಗೊತ್ತಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಿಯಮ ಉಲ್ಲಂಘಿಸಿದ್ದಕ್ಕಾಗಿ ₹ 44 ಸಾವಿರ ದಂಡ ಪಾವತಿ ಮಾಡುವಂತೆ ಪೊಲೀಸರು ಸವಾರನಿಗೆ ಹೇಳಿದ್ದರು. ಅದಕ್ಕೆ ಒಪ್ಪದ ಸವಾರ, ಪೊಲೀಸರ ಮೇಲೆ ಹರಿಹಾಯ್ದಿದ್ದರು. ‘ನನ್ನ ಮನೆ ಬಳಿ ಮಾತ್ರ ವಾಹನ ಚಲಾಯಿಸುತ್ತೇನೆ. ನಾನು ಏಕೆ ಹೆಲ್ಮೆಟ್ ಹಾಕಿಕೊಳ್ಳಬೇಕು ? ಸಿಗ್ನಲ್‌ನಲ್ಲಿ ಏಕೆ ಕಾಯುತ್ತ ನಿಲ್ಲಬೇಕು ? ಹಲವು ಪೊಲೀಸರು ಸಹ ನಿಯಮ ಉಲ್ಲಂಘಿಸುತ್ತಾರೆ. ಅವರಿಗೆ ಏಕೆ ದಂಡ ವಿಧಿಸುವುದಿಲ್ಲ’ ಎಂದು ಸವಾರ ಪ್ರಶ್ನಿಸಿದ್ದರು.’

ADVERTISEMENT

‘ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ವಾಹನ ಜಪ್ತಿ ಮಾಡಲು ಪೊಲೀಸರು ಮುಂದಾಗಿದ್ದರು. ಆಗ ಸವಾರ, ಪೊಲೀಸರನ್ನೇ ನಿಂದಿಸಿ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆ. ಸಿಬ್ಬಂದಿ ಬೆನ್ನಟ್ಟಿದ್ದರೂ ಅವರು ಸಿಕ್ಕಿಬಿದ್ದಿಲ್ಲ’ ಎಂದೂ ಮೂಲಗಳು ತಿಳಿಸಿವೆ.

‘ಹೆಲ್ಮೆಟ್ ಧರಿಸದೆ, ಸಿಗ್ನಲ್ ಜಂಪ್ ಮಾಡಿ, ಜಿಬ್ರಾ ಕ್ರಾಸಿಂಗ್‌ನಲ್ಲಿ ವಾಹನ ನಿಲ್ಲಿಸಿ, ಮೊಬೈಲ್‌ನಲ್ಲಿ ಮಾತನಾಡಿಕೊಂಡು ವಾಹನ ಚಲಾಯಿಸಿ, ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿದ್ದ ಸೇರಿ 81 ನಿಯಮಗಳನ್ನು ಸವಾರ ಉಲ್ಲಂಘಿಸಿದ್ದಾರೆ. ಅವರನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.