ADVERTISEMENT

ಸಂಚಾರ ಅಯೋಮಯ: ಜನರ ಪೀಕಲಾಟ

ಹದಗೆಟ್ಟ ಕಸ್ತೂರಿನಗರ ಬಡಾವಣೆಯ 2ನೇ ಹಾಗೂ 4ನೇ ಮುಖ್ಯರಸ್ತೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 20:07 IST
Last Updated 26 ಸೆಪ್ಟೆಂಬರ್ 2019, 20:07 IST
ಕಸ್ತೂರಿ ನಗರ 2ನೇ ಮುಖ್ಯರಸ್ತೆಯ ಸ್ಥಿತಿ– ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌
ಕಸ್ತೂರಿ ನಗರ 2ನೇ ಮುಖ್ಯರಸ್ತೆಯ ಸ್ಥಿತಿ– ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌   

ಬೆಂಗಳೂರು:ಟಾರಿನ ಹೊದಿಕೆಯಿಂದ ಹೊರಗೆ ಮೈಚಾಚಿದ ಗುಂಡಿಗಳು, ಅಲ್ಲಲ್ಲಿ ಚದುರಿ ಬಿದ್ದಿರುವ ಕಲ್ಲುಗಳು, ಮಳೆ‌ ಸುರಿದರೆ ಕೆಸರು, ಬಿಸಿಲಿಗೆ ದೂಳು. ಇಷ್ಟು ಸಾಲದೆಂಬಂತೆವಾಹನ ಸವಾರರನ್ನು ತಬ್ಬಿಬ್ಬು ಮಾಡುವಂತೆ ರಸ್ತೆಯಲ್ಲಿ ಸೃಷ್ಟಿಯಾಗಿರುವ ಉಬ್ಬು–ತಗ್ಗುಗಳು.

ಇದು, ಕಸ್ತೂರಿನಗರ ಬಡಾವಣೆಯ 2ನೇ ಹಾಗೂ 4ನೇ ಮುಖ್ಯರಸ್ತೆಯ ಚಿತ್ರಣ.110 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಉದ್ದೇಶದಿಂದ ಈ ಮುಖ್ಯರಸ್ತೆ ಅಡಿಯಲ್ಲಿ ಪೈಪ್‌ಲೈನ್ ಹಾಕುವ ಕಾಮಗಾರಿಯನ್ನು ಒಂದೂವರೆ ವರ್ಷಗಳ ಹಿಂದೆ ಆರಂಭಿಸಲಾಗಿತ್ತು.ಪೈಪ್ ಅಳವಡಿಸುವ ಕೆಲಸ ಪೂರ್ಣಗೊಂಡರೂ ರಸ್ತೆ ದುರಸ್ತಿಗೆ ಸಂಬಂಧಪಟ್ಟವರು ಮುಂದಾಗಿಲ್ಲ.

ಉತ್ತಮವಾಗಿಯೇ ಇದ್ದ ರಸ್ತೆಯ ಡಾಂಬರು ಕಿತ್ತು ಬಂದಿದೆ. ಇಡೀ ರಸ್ತೆ ಕಲ್ಲುಗಳಿಂದ ತುಂಬಿ ಹೋಗಿದ್ದು,ವಾಹನ ಸಂಚಾರ ಇರಲಿ, ಕಾಲ್ನಡಿಗೆಗೂ ಯೋಗ್ಯವಾಗಿಲ್ಲ. ಈ ರಸ್ತೆಯಲ್ಲಿ ನಿತ್ಯ ಸಂಚರಿಸುವವರ ಗೋಳು ಕೇಳುವವರೇ ಇಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

ADVERTISEMENT

ಈ ರಸ್ತೆ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣ ಮತ್ತು ಹಳೆ ಮದ್ರಾಸ್‌ ರಸ್ತೆಗೆ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ರಸ್ತೆಯ ಈ ಅವ್ಯವಸ್ಥೆಯಿಂದಾಗಿ ಜನರು ಪರ್ಯಾಯ ಮಾರ್ಗಗಳನ್ನು ಬಳಸುತ್ತಿದ್ದಾರೆ. ಸಂಚಾರ ಅಯೋಮಯವಾಗಿದ್ದು, ವ್ಯಾಪಾರಿಗಳ ಮೇಲೂ ಪರಿಣಾಮ ಬೀರುತ್ತಿದೆ.

‘ಮೊದಲೆಲ್ಲ ದಿನಕ್ಕೆ ಕನಿಷ್ಠ 100 ಎಳನೀರು ಮಾರಾಟವಾಗುತ್ತಿತ್ತು. ಈಗ 50 ಎಳನೀರು ಮಾರಾಟವಾಗುವುದು ಕಷ್ಟ. ಕಲ್ಲುಗಳ ರಾಶಿಯೇ ಇರುವುದರಿಂದ ವಾಹನಗಳ ಓಡಾಟ ಕಡಿಮೆಯಾಗಿದೆ. ದೂಳು ಹೆಚ್ಚಿರುವ ಕಾರಣ ಜನರು ಇಲ್ಲಿಗೆ ಬರುವುದು ವಿರಳ. ಬೇಗ ರಸ್ತೆ ಸರಿಪಡಿಸಿದರೆ ಸಾಕಪ್ಪ ಎನ್ನುವಂತಾಗಿದೆ’ ಎನ್ನುತ್ತಾರೆ ಎಳನೀರು ವ್ಯಾಪಾರಿ ಹರೀಶ್‌.

ರಸ್ತೆಗಳಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ. ಆಟೊಗಳು ಈ ಮಾರ್ಗದಲ್ಲಿ ಸಂಚರಿಸುವುದು ಕಡಿಮೆಯಾಗಿದೆ. ಬಿಎಂಟಿಸಿ ಬಸ್‌ಗಳು ಮಾರ್ಗ ಬದಲಿಸಿ ಸಾಗುತ್ತಿವೆ. ಇದರಿಂದ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

‘ಕಸ್ತೂರಿನಗರ ಬಸ್‌ ನಿಲ್ದಾಣದಿಂದ ಬೈಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣಕ್ಕೆ ತೆರಳಲು ಹೆಣಗಾಡುವಂತಾಗಿದೆ. ಬಸ್‌ಗಳು ಬರುತ್ತಿಲ್ಲ. ಆಟೊದವರು ಬೇಕಾಬಿಟ್ಟಿ ದುಡ್ಡು ಹೇಳುತ್ತಾರೆ. ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು ಆಗುತ್ತಿಲ್ಲ. ಹೈರಾಣಾಗಿ ಹೋಗಿದ್ದೇವೆ’ ಎಂದು ಇಲ್ಲಿನ ನಿವಾಸಿ ಉಮಾ ಅಳಲು ತೋಡಿಕೊಳ್ಳುತ್ತಾರೆ.

‘ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳಿಗೆ ದೂರು ಕೊಟ್ಟು ಸಾಕಾಗಿದೆ. ಶಾಸಕ ಎಸ್. ರಘು ಮತ್ತು ಸಂಸದ ಪಿ.ಸಿ. ಮೋಹನ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ರಸ್ತೆ ಸಂಪೂರ್ಣ ಹಾಳಾಗಿದ್ದು, ಮಳೆಗಾಲದಲ್ಲಿ ಇಡೀ ರಸ್ತೆ ಕೆಸರುಗದ್ದೆಯಂತಾಗುತ್ತದೆ. ಬಿಸಿಲು ಇರುವಾಗ ದೂಳು ಹೆಚ್ಚಾಗಿ ಮಕ್ಕಳು ಮತ್ತು ಹಿರಿಯರು ಉಸಿರಾಟದ ಸಮಸ್ಯೆ, ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ನೋವು ತೋಡಿಕೊಳ್ಳುತ್ತಾರೆ.

ರಸ್ತೆ ದುರಸ್ತಿಗೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಿಗಳು ಕೆಲವು ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ದುರಸ್ತಿ ಮಾಡದಿದ್ದರೆ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

‘ಬಂಡೆ ಸಿಕ್ಕಿದ್ದರಿಂದ ಸಮಸ್ಯೆ’

ಹೊರಮಾವು, ಕಲ್ಕೆರೆ, ಚನ್ನಸಂದ್ರಕ್ಕೆ ನೀರು ಒದಗಿಸುವ ಯೋಜನೆಯಿದು. ಕಸ್ತೂರಿನಗರದಿಂದ ರಾಮಮೂರ್ತಿನಗರ ಮತ್ತು ಟಿ.ಸಿ ಪಾಳ್ಯದ ಮೂಲಕ ಆ ವ್ಯಾಪ್ತಿಗೆ ಪೈಪ್‌ಲೈನ್‌ ಅಳವಡಿಸಲಾಗಿದೆ. ಆರು ತಿಂಗಳ ಹಿಂದೆ ಕೆಲಸ ಮುಗಿಸಿದ್ದೇವೆ. ಆದರೆ, ಸುಮಾರು 30-40 ಮೀಟರ್‌ನಷ್ಟು ಬಂಡೆ ಸಿಕ್ಕಿದ್ದರಿಂದ ಒಂದೂವರೆ ಮೀಟರ್‌ನಿಂದ ಎರಡು ಮೀಟರ್‌ ಆಳಕ್ಕೆ ರಸ್ತೆ ಅಗೆಯಬೇಕಾಯಿತು. ಇದಕ್ಕೆ ಸುಮಾರು ನಾಲ್ಕು ತಿಂಗಳು ಹಿಡಿಯಿತು.ಜನರು ಪ್ರತಿಭಟನೆ ಮಾಡಿರುವ ಹಿನ್ನೆಲೆಯಲ್ಲಿ ನಾವು ₹ 1.60 ಕೋಟಿಯನ್ನು ಬಿಬಿಎಂಪಿಗೆ ನೀಡಿ, ಬಂಡೆ ಎದುರಾದ ಜಾಗವನ್ನು ಬಿಟ್ಟು ಉಳಿದೆಡೆ ರಸ್ತೆ ನಿರ್ಮಿಸುವಂತೆ ತಿಳಿಸಿದ್ದೇವೆ.ನಮ್ಮ ಕಡೆಯಿಂದ ಆಗಬೇಕಾದ ಕೆಲಸ ಮುಗಿದಿದೆ.

-ಪ್ರಕಾಶ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಜಲಮಂಡಳಿ

'ಮನವಿ ಮಾಡಿದರೂ ನೀಗದ ಸಮಸ್ಯೆ'

ಮೇಯರ್‌, ಬಿಬಿಎಂಪಿ ಆಯುಕ್ತರು ಮತ್ತು ಮುಖ್ಯ ಎಂಜಿನಿಯರ್‌ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಹಲವು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗುತ್ತಿಗೆದಾರರು ಸರಿಯಾಗಿ ಕೆಲಸವೇ ಮಾಡುತ್ತಿಲ್ಲ. ಮೊದಲೆಲ್ಲ ಜಲಮಂಡಳಿಯವರು ರಸ್ತೆ ಅಗೆದರೆ ಅವರೇ ದುರಸ್ತಿ ಮಾಡುತ್ತಿದ್ದರು. ಈಗ ಆ ಜವಾಬ್ದಾರಿಯನ್ನು ಬಿಬಿಎಂಪಿಯೇ ವಹಿಸಿಕೊಂಡಿದೆ. ಆದರೆ, ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಜಲಮಂಡಳಿಯು ರಸ್ತೆ ದುರಸ್ತಿಗೆ ಅಗತ್ಯವಾದ ಹಣ ನೀಡಿದೆ. ಆ ದಾಖಲೆಯನ್ನು ಬಿಬಿಎಂಪಿ ಎಂಜಿನಿಯರ್‌ಗೆ ತೋರಿಸಿದರೂ, ಉಡಾಫೆ ಉತ್ತರ ನೀಡುತ್ತಾರೆ. ಪ್ರತಿಭಟನೆ ನಡೆಸಿದರೂ, ಜನಪ್ರತಿನಿಧಿಗಳು ಈ ಕಡೆ ಸುಳಿದಿಲ್ಲ. ಈ ಕ್ಷೇತ್ರದ ಶಾಸಕರು ಗಣೇಶ ಪೂಜೆ, ಮತ ಕೇಳುವುದಕ್ಕೆ ಮಾತ್ರ ಬರುತ್ತಾರೆಯೇ ಹೊರತು ಜನರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ.

-ನಂಜುಂಡೇಗೌಡ, ಸ್ಥಳೀಯ ನಿವಾಸಿ

ಎರಡು ದಿನಗಳಲ್ಲಿ ಜಾಬ್‌ ಕೋಡ್

ಯೋಜನೆಯಅಂದಾಜು ಪಟ್ಟಿ ಸಿದ್ಧಪಡಿಸಿಮುಖ್ಯ ಕಚೇರಿಗೆ ಜಾಬ್‌ ಕೋಡ್‌ಗೆ ಕಳುಹಿಸಿದ್ದೇವೆ. ಅಲ್ಲಿ ಅನುಮೋದನೆಗೊಂಡರೆ, ಕೆಆರ್‌ಐಡಿಎಲ್‌ ಮೂಲಕ ಅನುಷ್ಠಾನಗೊಳಿಸುತ್ತೇವೆ. ಇದನ್ನು ಬಿಬಿಎಂಪಿ ಆಯುಕ್ತರ ಗಮನಕ್ಕೆ ತಂದಿದ್ದೇನೆ. ಎರಡು ದಿನಗಳಲ್ಲಿ ಜಾಬ್‌ ಕೋಡ್‌ ಸಿಗುವ ವಿಶ್ವಾಸವಿದೆ. ಶೀಘ್ರದಲ್ಲಿ ಕೆಲಸ ಆರಂಭವಾಗಲಿದೆ.

-ಜಿ.ಎಂ. ರವೀಂದ್ರ, ಜಂಟಿ ಆಯುಕ್ತ‌ (ಪೂರ್ವ ವಲಯ), ಬಿಬಿಎಂಪಿ

***

ಹದಗೆಟ್ಟ ರಸ್ತೆಯಿಂದಾಗಿ ವ್ಯಾಪಾರ ಇಲ್ಲದಂತಾಗಿದೆ. ಮೊದಲೆಲ್ಲ ದಿನಕ್ಕೆ ₹40 ಸಾವಿರ ವ್ಯಾಪಾರವಾಗುತ್ತಿತ್ತು. ವಾರಾಂತ್ಯದಲ್ಲಿ ₹ 75 ಸಾವಿರ ವಹಿವಾಟು ನಡೆಸುತ್ತಿದ್ದೆವು. ರಸ್ತೆ ಅಗೆದ ದಿನದಿಂದ ಈ ಪ್ರಮಾಣ ಶೇ 75ರಷ್ಟು ಇಳಿಕೆಯಾಗಿದೆ.
- ವೆಂಕಟರಾಮು,ಹಾಪ್‌ಕಾಮ್ಸ್‌ ವ್ಯಾಪಾರಿ

ಜಾಬ್‌ ಕೋಡ್‌ ಬರದ ಕಾರಣ ಬಿಬಿಎಂಪಿ ಕಾಮಗಾರಿ ಪ್ರಾರಂಭಿಸಿಲ್ಲ. ಜನರ ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್‌ಗೆ ತಿಳಿಸಿದ್ದೇನೆ. ಸೋಮವಾರದಿಂದ ಕೆಲಸ ಆರಂಭಿಸಲು ಸೂಚಿಸಿದ್ದೇನೆ.
-ಎಸ್‌. ರಘು, ಕ್ಷೇತ್ರದ ಶಾಸಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.