
ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರಲ್ಲಿ ಆಹಾರ ವಿತರಿಸುವ ಹುಡುಗರ ಸಂಖ್ಯೆ ಅಧಿಕವಾಗಿದ್ದು ಅವರ ವಿರುದ್ಧ ಮೂರು ವರ್ಷಗಳಲ್ಲಿ 1.46 ಲಕ್ಷ ಪ್ರಕರಣಗಳು ದಾಖಲಾಗಿವೆ.
ನಗರದಲ್ಲಿ ಐಟಿಬಿಟಿ, ವಾಣಿಜ್ಯ ಕಾರಿಡಾರ್‌ಗಳು ಹೆಚ್ಚಿರುವ ಪ್ರದೇಶಗಳಲ್ಲಿಯೇ ಆಹಾರ ವಿತರಕರು ಸಂಚಾರದ ವೇಳೆ ಅಶಿಸ್ತು ತೋರುತ್ತಿರುವುದು ಹೆಚ್ಚಾಗಿದೆ ಎಂಬುದು ಅಂಕಿ ಸಂಖ್ಯೆಗಳಿಂದ ಗೊತ್ತಾಗಿದೆ.
ನಿಗದಿತ ಅವಧಿಯೊಳಗೆ ಆಹಾರ ಪೂರೈಸಬೇಕಾದ ಧಾವಂತದಲ್ಲಿ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದೆ. 2023ರಲ್ಲಿ 30,968 ಪ್ರಕರಣಗಳು 2024ರಲ್ಲಿ 52,153 ಮತ್ತು 2025ರಲ್ಲಿ 63,718 ಪ್ರಕರಣಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಉಲ್ಲಂಘನೆ ಪ್ರಕರಣಗಳು ಏರುಗತಿಯಲ್ಲಿ ಸಾಗಿವೆ.
ಬೆಂಗಳೂರು ಸಂಚಾರ ಪೊಲೀಸ್ ಪೂರ್ವ ವಿಭಾಗವು ವೈಟ್‌ಫೀಲ್ಡ್, ಕೆ.ಆರ್. ಪುರ, ಇಂದಿರಾನಗರ, ಹಲಸೂರು ಪ್ರದೇಶಗಳನ್ನು ಒಳಗೊಂಡಿದ್ದು, ಇದೇ ವಿಭಾಗವು ನಿಯಮ ಉಲ್ಲಂಘನೆಯ ಕೇಂದ್ರವೂ ಆಗಿದೆ. ಮೂರು ವರ್ಷಗಳಲ್ಲಿ 73,971 ಪ್ರಕರಣಗಳು ಇಲ್ಲೇ ದಾಖಲಾಗಿವೆ.
ವೈಟ್‌ಫೀಲ್ಡ್ ಉಪವಿಭಾಗ ಒಂದರಲ್ಲಿಯೇ 25,000ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು ಅಧಿಕ ಸಂಚಾರ ಒತ್ತಡ ಮತ್ತು ಐಟಿ ವಲಯದ ಕ್ಯಾಂಪಸ್‌ಗಳು ಮತ್ತು ವಸತಿ ಅಪಾರ್ಟ್‌ಮೆಂಟ್‌ಗಳಿಗೆ ಆಹಾರ ವಿತರಣಾ ಚಟುವಟಿಕೆ ಹೆಚ್ಚಿರುವುದನ್ನು ಸೂಚಿಸುತ್ತದೆ.
ಹಲಸೂರು ಮತ್ತು ಬಾಣಸವಾಡಿ ವಿಭಾಗದ ಪ್ರಮುಖ ಹಾಟ್‌ಸ್ಪಾಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ, ಪೂರ್ವ) ಸಾಹಿಲ್ ಬಾಗ್ಲಾ ತಿಳಿಸಿದರು.
ಸಂಚಾರ ನಿಯಮ ಉಲ್ಲಂಘನೆಯನ್ನು ನಿಯಂತ್ರಿಸಲು ವಿಶೇಷ ಕಾರ್ಯಾಚರಣೆ ನಡೆಸಿದಾಗ ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸುವುದು, ಏಕಮುಖ ಸಂಚಾರ ಇರುವ ರಸ್ತೆಗಳಲ್ಲಿ ವಿರುದ್ಧ ದಿಕ್ಕಿನಿಂದ ಮತ್ತು ಪಾದಚಾರಿ ಮಾರ್ಗಗಳಲ್ಲಿ ಸವಾರಿ ಮಾಡುವುದು ಕಂಡು ಬಂದಿದೆ.
ದಕ್ಷಿಣ ವಿಭಾಗದಲ್ಲಿ 44,313 ಪ್ರಕರಣಗಳು ದಾಖಲಾಗಿವೆ. ಮೈಕೊ ಲೇಔಟ್, ಆಡುಗೋಡಿ ಮತ್ತು ಎಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ನಿರಂತರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ. ವಿರುದ್ಧ ದಿಕ್ಕಿನಲ್ಲಿ ಚಾಲನೆ, ಸಿಗ್ನಲ್ ಉಲ್ಲಂಘಿಸುವುದು ಮತ್ತು ಹೆಲ್ಮೆಟ್ ಧರಿಸದಿರುವುದು ಕಂಡು ಬಂದಿದೆ.
ಸಂಚಾರ ಉಲ್ಲಂಘನೆ ಕುರಿತು ಆಹಾರ ಮತ್ತು ವಿತರಣಾ ಸಂಘಟಕರಿಗೆ ಸೂಚನೆಗಳನ್ನು ಪೊಲೀಸ್ ಆಯುಕ್ತರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನೀಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ, ದಕ್ಷಿಣ) ಗೋಪಾಲ್ ಎಂ ಬ್ಯಾಕೋಡ್ ಮಾಹಿತಿ ನೀಡಿದರು.
ಆಹಾರ ಮತ್ತು ದಿನಸಿ ವಸ್ತುಗಳನ್ನು ಜೀವ ಪಣಕ್ಕಿಟ್ಟು 10 ನಿಮಿಷಗಳೊಳಗೆ ಮುಟ್ಟಿಸುವ ಧಾವಂತ ಯಾಕೆಂದು ಗೊತ್ತಾಗುತ್ತಿಲ್ಲ. ಇದೇನು ಔಷಧ ಅಥವಾ ಆಂಬುಲೆನ್ಸ್‌ಗಳಷ್ಟು ತುರ್ತು ಅಲ್ಲ. ಐದು ನಿಮಿಷ ತಡವಾದರೂ ಏನೂ ಆಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಆದರೆ, ಆಹಾರ ವಿತರಕರು ಹೇಳುವುದೇ ಬೇರೆ. ‘ನಾವು ನಿಗದಿತ ಸಮಯದಲ್ಲಿ ತಲುಪಿದ್ದೇವೆಯೇ ಇಲ್ಲವೇ ಎಂಬುದನ್ನು ಕಂಪನಿ ಮೇಲ್ವಿಚಾರಣೆ ಮಾಡುತ್ತಿರುತ್ತದೆ. ಒಂದು ನಿಮಿಷ ತಡವಾದರೂ ನಮ್ಮ ವೇತನಕ್ಕೆ ಕತ್ತರಿ ಬೀಳುತ್ತದೆ’ ಎಂದು ಅಸಹಾಯಕತೆ ತೋಡಿಕೊಂಡರು.
ನಿಗದಿತ ಸಮಯದ ಒಳಗೆ ಗ್ರಾಹಕರಿಗೆ ಆಹಾರ ತಲುಪಿಸಿದರೆ ನಮಗೆ ಅಂಕ ಸಿಗುತ್ತದೆ. ತಡವಾದರೆ ದಂಡ ವಿಧಿಸುತ್ತಾರೆ. ವೇತನ ಹೆಚ್ಚಳವಾಗಬೇಕಿದ್ದರೆ ದಿನಕ್ಕೆ 18 ಬಾರಿ ವಿತರಣೆ ಮಾಡಬೇಕು ಎಂದು ಆಹಾರ ವಿತರಕರು ತಿಳಿಸಿದರು.
ಇ–ಬೈಕ್‌ಗೆ ದಂಡ ಇಲ್ಲ!
ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸಲಾಗುತ್ತಿದೆ. ಆದರೆ ಇ–ಬೈಕ್‌ಗಳು ದಂಡದಿಂದ ತಪ್ಪಿಸಿಕೊಳ್ಳುತ್ತಿವೆ. ಇ–ಬೈಕ್‌ಗಳನ್ನು ಸೈಕಲ್‌ಗಳಂತೆ ಪರಿಗಣಿಸಿರುವುದರಿಂದ ಮೋಟಾರ್ ವಾಹನ ಕಾಯ್ದೆಯಡಿ ಬರುವುದಿಲ್ಲ. ಹಾಗಾಗಿ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಸುರಕ್ಷತಾ ತರಬೇತಿ
ಆಹಾರ ವಿತರಕರ ಅಗತ್ಯಗಳು ಅರ್ಥವಾದರೂ ರಸ್ತೆ ಸುರಕ್ಷತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ವಿತರಕ ಕಂಪನಿಗಳೊಂದಿಗೆ ಸಂವಾದ ನಡೆಸಲು ಸುರಕ್ಷತಾ ತರಬೇತಿ ನೀಡಲು ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.