ADVERTISEMENT

ಮಿಡಿ ಬಸ್‌ ಕಾರ್ಯಾಚರಣೆ ಸ್ಥಗಿತ ಬಿಎಂಟಿಸಿ ಚಾಲಕರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 18:59 IST
Last Updated 4 ಫೆಬ್ರುವರಿ 2022, 18:59 IST

ಬೆಂಗಳೂರು: ಎರಡು ಅಗ್ನಿ ಅವಘಡಗಳ ಕಾರಣದಿಂದ 186 ಮಿಡಿ ಬಸ್‌ಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬಿಎಂಟಿಸಿ, ವಾಹನಗಳ ಸುರಕ್ಷತೆ ಬಗ್ಗೆ ವರದಿ ನಿರೀಕ್ಷಿಸುವ ಜೊತೆಗೆ ಚಾಲಕರಿಗೂ ಅಗ್ನಿ ಸುರಕ್ಷತೆಯ ಕುರಿತು ತರಬೇತಿ ಆರಂಭಿಸಿದೆ.

‌186 ಮಿಡಿ ಬಸ್‌ಗಳನ್ನು 2014-15ರಲ್ಲಿ ಅಶೋಕ್ ಲೇಲ್ಯಾಂಡ್‌ ಕಂಪನಿಯಿಂದ ಖರೀದಿಸಲಾಗಿದೆ. ಅವುಗಳಲ್ಲಿ ಎರಡು ಬಸ್‌ಗಳಲ್ಲಿ ಬೆಂಕಿ ಅವಘಡ(ಜನವರಿ 21 ಮತ್ತು ಫೆಬ್ರವರಿ 1 ರಂದು) ಸಂಭವಿಸಿದೆ. ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಮತ್ತು ಕಂಪನಿಯ ತಜ್ಞರು ಪ್ರತಿದಿನ 20 ರಿಂದ 30 ಬಸ್‌ಗಳನ್ನು ಪರಿಶೀಲಿಸುತ್ತಿದ್ದಾರೆ.

‘ಬಸ್‌ಗಳಲ್ಲಿ ಇರುವ ಲೋಪದ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಬಸ್‌ನಲ್ಲಿ ಇದ್ದ ಅಗ್ನಿಶಾಮಕಗಳನ್ನು ಚಾಲಕ ಅಥವಾ ನಿರ್ವಾಹಕರು ಏಕೆ ಬಳಸಿಲ್ಲ ಎಂಬುದನ್ನೂ ವಿಚಾರಿಸುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ವರದಿ ಸಲ್ಲಿಸಲಾಗುವುದು’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ತಿಳಿಸಿದರು.

ADVERTISEMENT

‘ಬಸ್‌ಗಳನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದ ಬಳಿಕವೇ ರಸ್ತೆಗೆ ಇಳಿಸಲಾಗುವುದು. ಎಲ್ಲಾ ಬಸ್‌ಗಳಲ್ಲೂ ಅಗ್ನಿ ನಂದಿಸುವ ಸಾಧನಗಳು ಸುಸ್ಥಿತಿಯಲ್ಲಿವೆ’ ಎಂದು ಅವರು ಹೇಳಿದರು.

ತುರ್ತು ಪರಿಸ್ಥಿತಿಯಲ್ಲಿ ಅಗ್ನಿಶಾಮಕ ಸಾಧನವನ್ನು ಹೇಗೆ ಬಳಸಬೇಕು ಎಂಬುದು ಸಿಬ್ಬಂದಿಗೆ ತಿಳಿದಿಲ್ಲ ಎಂಬುದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ಆದ್ದರಿಂದ ಚಾಲಕರಿಗೆ ತರಬೇತಿ ಕೊಡಿ
ಸುವ ಕಾರ್ಯವನ್ನು ಶುಕ್ರವಾರದಿಂದ ಬಿಎಂಟಿಸಿ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.