ADVERTISEMENT

ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ಅಗತ್ಯ: ಸವದಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 19:19 IST
Last Updated 12 ಫೆಬ್ರುವರಿ 2021, 19:19 IST
ವ್ಯಂಗ್ಯಚಿತ್ರ ಪ್ರದರ್ಶನ ವೀಕ್ಷಿಸಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮತ್ತು ಚಿತ್ರ ನಟಿ ಶ್ರೀಲೀಲಾ. ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಕೆ.ಟಿ.ಹಾಲಸ್ವಾಮಿ ಇದ್ದರು –ಪ್ರಜಾವಾಣಿ ಚಿತ್ರ
ವ್ಯಂಗ್ಯಚಿತ್ರ ಪ್ರದರ್ಶನ ವೀಕ್ಷಿಸಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮತ್ತು ಚಿತ್ರ ನಟಿ ಶ್ರೀಲೀಲಾ. ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಕೆ.ಟಿ.ಹಾಲಸ್ವಾಮಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಚಾಲನಾ ಪರವಾನಗಿ ವಿತರಿಸುವ ಮುನ್ನ ಸಾರಿಗೆ ಇಲಾಖೆಯಿಂದಲೇ ತರಬೇತಿ ನೀಡುವ ಅಗತ್ಯವಿದೆ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.

ರಸ್ತೆ ಸುರಕ್ಷತೆ ಮಾಸಾಚರಣೆ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದ್ದ ವ್ಯಂಗ್ಯಚಿತ್ರ ಪ್ರದರ್ಶನ ಉದ್ಘಾಟಿಸಿದ ಅವರು, ‘ಅಪಘಾತಗಳಿಂದ ಆಗುವ ಅನಾಹುತಗಳ ಬಗ್ಗೆ ಚಾಲಕರಿಗೆ ಮನವರಿಕೆ ಮಾಡಿಸಬೇಕು. ಜಾಗೃತಿ ತರಬೇತಿ ನೀಡಿದ ಬಳಿಕವೇ ಪರವಾನಗಿ ನೀಡುವ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಯೋಚಿಸಬೇಕು’ ಎಂದು ತಿಳಿಸಿದರು.

‘ವಿದೇಶಗಳಿಗೆ ಹೋಲಿಸಿದರೆ ರಸ್ತೆ ಸುರಕ್ಷತೆಯ ಬಗ್ಗೆ ಭಾರತದಲ್ಲಿ ಜಾಗೃತಿ ಕಡಿಮೆ ಇದೆ.ಜಾಗೃತಿ ಮೂಡಿಸುವ ಸಲುವಾಗಿಯೇ ಕೇಂದ್ರ ಸರ್ಕಾರ ಪ್ರತಿ ವರ್ಷ ₹7 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಆದರೂ, ಮುನ್ನೆಚ್ಚರಿಕೆ ಬಗ್ಗೆ ಅಷ್ಟಾಗಿ ‌ಗಮನಹರಿಸುತ್ತಿಲ್ಲ. ಇದರಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ’ ಎಂದರು.

ADVERTISEMENT

ಮಾಸಾಚರಣೆ ಅಂಗವಾಗಿ ಸಾರಿಗೆ ಇಲಾಖೆ ಹಮ್ಮಿಕೊಂಡಿರುವ ವಿವಿಧ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಸಾರಿಗೆ ಆಯುಕ್ತ ಎನ್.ಶಿವಕುಮಾರ್ ವಿವರಿಸಿದರು.

ಅಪಘಾತ ತಡೆಗೆ, ಸಂಚಾರ ಸುರಕ್ಷತೆಗೆ ಏನೆಲ್ಲಾ ಜಾಗ್ರತೆ ವಹಿಸಬೇಕು ಎಂಬ ಅರಿವು ಮೂಡಿಸುವ 200ಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳು ಪ್ರದರ್ಶನದಲ್ಲಿದ್ದವು. ಮೂರು ದಿನಗಳ ಕಾಲ ಈ ಪ್ರದರ್ಶನ ಇರಲಿದೆ.

ಅತ್ಯುತ್ತಮ ವ್ಯಂಗ್ಯಚಿತ್ರ ರಚಿಸಿದ ‘ಪ್ರಜಾವಾಣಿ’ ಕಲಾವಿದ ಬಾವು ಪತ್ತಾರ್ ಸೇರಿ ಹಲವರಿಗೆ ಇದೇ ವೇಳೆ ಪ್ರಶಸ್ತಿ ಪತ್ರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.