ADVERTISEMENT

ಎರಡು ತಿಂಗಳಲ್ಲಿ 862 ಟ್ರಾನ್ಸ್‌ಫಾರ್ಮರ್ ಸ್ಥಳಾಂತರ: ಹೈಕೋರ್ಟ್‌ಗೆ ಬೆಸ್ಕಾಂ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 19:49 IST
Last Updated 4 ಜುಲೈ 2022, 19:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಪಾದಚಾರಿ ಮಾರ್ಗದಲ್ಲಿಅಳವಡಿಸಲಾಗಿರುವ 862 ಟ್ರಾನ್ಸ್‌ಫಾರ್ಮರ್‌ಗಳನ್ನು ಎರಡು ತಿಂಗಳಲ್ಲಿ ಸ್ಥಳಾಂತರಿಸಲಾಗುವುದು’ ಎಂದು ಬೆಸ್ಕಾಂ (ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ) ಹೈಕೋರ್ಟ್‌ಗೆ ತಿಳಿಸಿದೆ.

‘ಪಾದಚಾರಿ ಮಾರ್ಗ ಹಾಗೂ ರಾಜಕಾಲುವೆಗಳ ಮೇಲಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ತೆರವುಗೊಳಿಸಲು ನಿರ್ದೇಶಿಸಬೇಕು’ ಎಂದು ಕೋರಿ ನಿವೃತ್ತ ವಿಂಗ್ ಕಮಾಂಡರ್ ವಿ.ಜಿ. ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬೆಸ್ಕಾಂ ಪರ ವಕೀಲರು ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿ, ‘ಪಾದಚಾರಿ ಮಾರ್ಗಗಳಲ್ಲಿ ಅಳವಡಿಸಲಾಗಿರುವ 2,587 ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರಿಸಲು ಗುರುತಿಸಲಾಗಿದೆ. ಈವರೆಗೆ 620 ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸಲಾಗಿದೆ. ಉಳಿದ 862 ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸಲು ಎರಡು ತಿಂಗಳ ಗುರಿ ಇರಿಸಿಕೊಳ್ಳಲಾಗಿದೆ. ಇದಕ್ಕೆ ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ಕೋರಿದರು.

ADVERTISEMENT

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಸ್ಥಳಾಂತರ ಕಾರ್ಯದ ಪ್ರಗತಿ ವರದಿ ಸಲ್ಲಿಸಲು ನಿರ್ದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.