ಬೆಂಗಳೂರು: ನಗರದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ಗುರುತಿಸಿ ಅನಾಹುತಕ್ಕೂ ಮುನ್ನ ತೆರವುಗೊಳಿಸಲು ಮೊದಲ ಬಾರಿಗೆ ವೃಕ್ಷ ತಪಾಸಕರನ್ನು ನೇಮಕ ಮಾಡಲಾಗುತ್ತಿದೆ.
ಮಳೆ- ಗಾಳಿಯಿಂದಾಗಿ ನಗರದಲ್ಲಿ ಆಗಾಗ ಮರ- ಕೊಂಬೆಗಳು ಉರುಳುವ ಸನ್ನಿವೇಶವನ್ನು ಕಾಣುತ್ತೇವೆ. ಇಂತಹ ಮರಗಳನ್ನು ವೈಜ್ಞಾನಿಕ ನೆಲೆಯಲ್ಲಿ ಗುರುತಿಸಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲು ವೃಕ್ಷ ತಪಾಸಕರು ನೆರವಾಗಲಿದ್ದಾರೆ.
‘ಜಿಬಿಎ ವ್ಯಾಪ್ತಿಯಲ್ಲಿ 55 ಮಂದಿ ಅರಣ್ಯ ಸಿಬ್ಬಂದಿ ಇರಬೇಕಿತ್ತು. ಸದ್ಯ ಇರುವುದು 18 ಮಂದಿ ಮಾತ್ರ. ಅವರಿಂದಲೇ ಇಡೀ ನಗರದಲ್ಲಿ ಮರಗಳ ಮಾಹಿತಿ ಸಂಗ್ರಹ, ನಿರ್ವಹಣೆ ಕಷ್ಟ ಎನ್ನುವ ಕಾರಣದಿಂದ ಮಾಸಿಕ ₹30 ಸಾವಿರ ವೇತನದೊಂದಿಗೆ, 2 ತಿಂಗಳ ಅವಧಿಗೆ 10 ವೃಕ್ಷ ತಪಾಸಕರ ನೇಮಕಕ್ಕೆ ಅನುಮತಿ ದೊರೆತಿದೆ. ಮುಂದೆ ಅಗತ್ಯ ನೋಡಿಕೊಂಡು ಅವಧಿ ವಿಸ್ತರಣೆ ಹಾಗೂ ಇನ್ನಷ್ಟು ವೃಕ್ಷ ತಪಾಸಕರನ್ನು ನೇಮಿಸಿಕೊಳ್ಳಲಾಗುತ್ತದೆ’ ಎಂದು ಅರಣ್ಯ ಅಧಿಕಾರಿಗಳು ಹೇಳಿದರು.
ಬೆಂಗಳೂರಿನಲ್ಲಿ ಶತಮಾನದಷ್ಟು ಹಳೆಯ ಮರಗಳು ಇವೆ. ಕೆಲವು ಮರಗಳು ಗಟ್ಟಿಯಾಗಿದ್ದರೂ ಪೊಟರೆಗಳು, ಬಿರುಕು ಇರುವ ಮಾಹಿತಿಯನ್ನು ವೃಕ್ಷ ತಪಾಸಕರು ಸಂಗ್ರಹಿಸಲಿದ್ದಾರೆ. ಮರಗಳ ಜಾತಿ, ಅಂದಾಜು ವಯಸ್ಸಿನ ವಿವರಗಳನ್ನು ಪಡೆಯಲಿದ್ದಾರೆ.
ಮರಗಳ ಮಾಹಿತಿಯನ್ನು ಸಂಗ್ರಹಿಸಲು ದೂರ ಸಂವೇದಿ ಆನ್ವಯಿಕ ಕೇಂದ್ರದ ಸಹಕಾರದೊಂದಿಗೆ ಪ್ರತ್ಯೇಕ ಆ್ಯಪ್ ಅನ್ನು ಅರಣ್ಯ ವಿಭಾಗವು ಅಣಿಗೊಳಿಸುತ್ತಿದೆ. ಒಂದೆರಡು ತಿಂಗಳಲ್ಲಿ ಇದು ಬಳಕೆಗೆ ಲಭ್ಯವಾಗಲಿದೆ. ತಮ್ಮ ನೆರೆಯ ಮರದ ಕುರಿತು ಮಾಹಿತಿಯನ್ನು ಇದರಲ್ಲಿ ನೀಡಲು ಜನರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಅನಾಹುತಕಾರಿ ಮರದ ಮಾಹಿತಿ ಇದ್ದರೆ ವೃಕ್ಷ ತಪಾಸಕರು ಪರೀಕ್ಷೆ ನಡೆಸಿದ ಬಳಿಕ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ರಾಜ್ಯದ ನಗರ, ಪಟ್ಟಣಗಳಲ್ಲೂ ಸದ್ಯ ಅರಣ್ಯ ಇಲಾಖೆ ಇಲ್ಲವೇ ಸ್ಥಳೀಯ ಸಂಸ್ಥೆಗಳಿಗೆ ಬರುವ ದೂರು ಆಧರಿಸಿ ಅಪಾಯಕಾರಿ ಮರಗಳನ್ನು ನಿಗದಿತ ಕಾಲಮಿತಿ ಒಳಗೆ ತೆರವುಗೊಳಿಸಲಾಗುತ್ತಿದೆ. ರಾಜಧಾನಿಯಲ್ಲಿ ಮರಗಳ ಕುರಿತು ಶೈಕ್ಷಣಿಕ ಹಾಗೂ ನಿಖರ ಜ್ಞಾನ ಇರುವ ವೃಕ್ಷ ತಪಾಸಕರನ್ನು ನೇಮಿಸಿ ಮರಗಳ ರಕ್ಷಣೆಯಲ್ಲೂ ವೃತ್ತಿಪರತೆ ಕಂಡುಕೊಳ್ಳಲು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆ 1976ರ ಅಡಿಯಲ್ಲಿ ಈ ವ್ಯವಸ್ಥೆ ಮಾಡಲಾಗುತ್ತಿದೆ.
ವೃಕ್ಷ ತಪಾಸಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಸಾಕಷ್ಟು ಅರ್ಜಿಗಳು ಬಂದಿವೆ. ತಜ್ಞರ ಸಮಿತಿ ಅರ್ಹರನ್ನು ಆಯ್ಕೆ ಮಾಡಲಿದ್ದು ತರಬೇತಿ ನಂತರ ನಿಯೋಜಿಸಲಾಗುತ್ತದೆ.– ಸುದರ್ಶನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಂಗಳೂರು
ಬೆಂಗಳೂರು ಹಸಿರು ರಸ್ತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.