ADVERTISEMENT

ಮರ ಉಳಿಸಲು ಅಭಿಯಾನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 18:31 IST
Last Updated 28 ಮಾರ್ಚ್ 2021, 18:31 IST
ವೃಕ್ಷ ಬಚಾವೋ ಆಂದೋಲನ ಸಮಿತಿಯ ಸದಸ್ಯರು ‘ಮರ ಉಳಿಸಿ’ ಅಭಿಯಾನ ನಡೆಸಿದರು
ವೃಕ್ಷ ಬಚಾವೋ ಆಂದೋಲನ ಸಮಿತಿಯ ಸದಸ್ಯರು ‘ಮರ ಉಳಿಸಿ’ ಅಭಿಯಾನ ನಡೆಸಿದರು   

ಕೆ.ಆರ್.ಪುರ: ‘ಅಭಿವೃದ್ಧಿಯ ಹೆಸರಿನಲ್ಲಿ ಎಚ್ಎಎಲ್ ಮುಖ್ಯ ರಸ್ತೆಯ ಸುರಂಜನ್ ದಾಸ್ ಜಂಕ್ಷನ್ ಬಳಿ ಕೆಳ ಸೇತುವೆ ನಿರ್ಮಾಣಕ್ಕಾಗಿ ಸಾಲುಮರಗಳಿಗೆ ಪಾಲಿಕೆಯು ಕೊಡಲಿ ಹಾಕುವುದನ್ನು ನಿಲ್ಲಿಸಿ ಮರಗಳಿಗೆ ರಕ್ಷಣೆ ನೀಡಬೇಕು’ ಎಂದು ವೃಕ್ಷ ಬಚಾವೋ ಆಂದೋಲನ ಸಮಿತಿಯ ಸದಸ್ಯರು ಭಾನುವಾರ ಅಭಿಯಾನ ನಡೆಸಿದರು.

ಪಾಲಿಕೆ ಸದಸ್ಯ ಎನ್. ರಮೇಶ್ ನೇತೃತ್ವದಲ್ಲಿ ಮರಗಳಿಗೆ ಬಟ್ಟೆಯ ಪರದೆ ಕಟ್ಟುವ ಮೂಲಕ ಮರ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಎಚ್ಎಎಲ್ ಬಸ್ ನಿಲ್ದಾಣ ಬಳಿ ಹಮ್ಮಿಕೊಂಡಿದ್ದ ಈ ಅಭಿಯಾನದಲ್ಲಿ ‘ನಮ್ಮ ಮರ ನಮ್ಮ ಉಸಿರು’, ‘ಇದು ನನ್ನ ಕಣ್ಣೀರು, ರಕ್ತ ಕಣ್ಣೀರು’, ‘ಮರಕ್ಕೂ ಜೀವವಿದೆ ಅಳಲು ಬಿಡಬೇಡಿ’ ಎಂಬ ಘೋಷವಾಕ್ಯಗಳನ್ನು ಕೂಗಿದರು.

ADVERTISEMENT

ಎನ್. ರಮೇಶ್, ‘ಸರ್ಕಾರವು ಅಭಿವೃದ್ಧಿ ಹೆಸರಿನಲ್ಲಿ ಮೆಟ್ರೊ, ಮೇಲ್ಸೇತುವೆ, ಕೆಳಸೇತುವೆ ಎಂದು ಹೇಳಿಕೊಂಡು 150 ರಿಂದ 200 ವರ್ಷಗಳ ಮರಗಳನ್ನು ರಾತ್ರೋ ರಾತ್ರಿ ಕಡಿಯಲು ಮುಂದಾಗಿದೆ. ಮರಗಳನ್ನು ಕೊಡಲಿ ಹಾಕುವ ಕೆಲಸ ಮಾಡುತ್ತಿದೆ’ ಎಂದು ದೂರಿದರು.

‘ಮುಖ್ಯ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ವಿಸ್ತರಣೆಗೆ ಸರ್ವೀಸ್‌ ರಸ್ತೆ ಮಾಡಿಕೊಂಡು ಈ ಮರಗಳ ಬದಲಾಗಿ ಬೇರೆ ಗಿಡಗಳನ್ನು ನೆಟ್ಟರೆ ನಮ್ಮ ಅಭ್ಯಂತರವಿಲ್ಲ. ಆದರೆ ಮರಗಳಿಗೆ ಕಟ್ಟರ್, ಕೊಡಲಿ, ಇಂಜೆಕ್ಷನ್ ಕೊಡುವುದು, ಆಸಿಡ್‌ ಹಾಕುವುದನ್ನು ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೃಕ್ಷ ಬಚಾವೋ ಆಂದೋಲನ ಸಮಿತಿಯ ಮುಖ್ಯಸ್ಥ ಪರಿಸರ ಮಂಜು, ‘ಎಚ್ಎಎಲ್ ಮುಖ್ಯ ರಸ್ತೆಯ ಕೆಳ ಸೇತುವೆ ನಿರ್ಮಾಣಕ್ಕೆ ಅಡ್ಡಲಾಗಿರುವ ಮರಗಳನ್ನು ತೆರವುಗೊಳಿಸಲು ಒಟ್ಟು 48 ಮರಗಳ ಪೈಕಿ 25 ಕ್ಕೆ ಕೊಡಲಿ ಏಟು ನೀಡಲು ಪಾಲಿಕೆ ನಿರ್ಧರಿಸಿದೆ. ಈಗಾಗಲೇ 8 ಬೃಹತ್ ಮರಗಳನ್ನು ಕತ್ತರಿಸಲಾಗಿದ್ದು ಇನ್ನುಳಿದ ಹದಿನೇಳು ಮರಗಳ ರಕ್ಷಣೆಗೆ ಮುಂದಾಗಿದ್ದೇವೆ’ ಎಂದರು.

ವನ್ಯಜೀವಿ ಸಂರಕ್ಷಕ ಸಿಂಹಾದ್ರಿ ಕಿರಣ್ ಕುಮಾರ್, ಲಕ್ಷ್ಮೀನಾರಾಯಣ, ಹರೀಶ್, ಶಿವಪ್ಪ ಹಾಗೂ ಸ್ಥಳೀಯ ಪರಿಸರ ಪ್ರೇಮಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.