ADVERTISEMENT

‘ಕನ್ನಡ ರಂಗಭೂಮಿಯ ‘ಕರ್ಣ’ನಾದ ನಾಯರಿ’

ಕಲಾವಿದನ ಒಡನಾಟ, ಜೀವನವನ್ನು ಸ್ಮರಿಸಿದ ರಂಗಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 20:31 IST
Last Updated 11 ಜನವರಿ 2023, 20:31 IST
ಎಚ್.ಎಸ್.ಶಿವಪ್ರಕಾಶ್, ಶಿಕ್ಷಣ ತಜ್ಞ ಪ್ರೊ.ಕೆ.ಈ.ರಾಧಾಕೃಷ್ಣ, ಜೆ.ಶ್ರೀನಿವಾಸಮೂರ್ತಿ, ರಂಗಕರ್ಮಿಗಳಾದ ಬಿ.ವಿ.ರಾಜಾರಾಂ, ಕೆ.ವಿ.ನಾಗರಾಜಮೂರ್ತಿ ಅವರು ಗೋಪಾಲಕೃಷ್ಣ ನಾಯರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.       –ಪ್ರಜಾವಾಣಿ ಚಿತ್ರ
ಎಚ್.ಎಸ್.ಶಿವಪ್ರಕಾಶ್, ಶಿಕ್ಷಣ ತಜ್ಞ ಪ್ರೊ.ಕೆ.ಈ.ರಾಧಾಕೃಷ್ಣ, ಜೆ.ಶ್ರೀನಿವಾಸಮೂರ್ತಿ, ರಂಗಕರ್ಮಿಗಳಾದ ಬಿ.ವಿ.ರಾಜಾರಾಂ, ಕೆ.ವಿ.ನಾಗರಾಜಮೂರ್ತಿ ಅವರು ಗೋಪಾಲಕೃಷ್ಣ ನಾಯರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.       –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಯೋಗಶೀಲ ರಂಗ ನಿರ್ದೇಶಕರಾಗಿದ್ದ ಗೋಪಾಲಕೃಷ್ಣ ನಾಯರಿ ಅವರು, ಹೊಸತನಕ್ಕಾಗಿ ಸದಾ ತುಡಿಯುತ್ತಿದ್ದರು. ರಂಗ ಚಟುವಟಿಕೆಗಳಲ್ಲಿ ರಾಜಿ ಮಾಡಿಕೊಳ್ಳದ ಅವರು, ಕನ್ನಡ ರಂಗಭೂಮಿಯ ‘ಕರ್ಣ’ನಾದರು’ ಎಂದು ಅವರ ಒಡನಾಡಿಗಳು ಹಾಗೂ ಆಪ್ತರು ಸ್ಮರಿಸಿಕೊಂಡರು.

ರಂಗ ಗೆಳೆಯರ ಬಳಗ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ನಾಯರಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ಕವಿ ಎಚ್.ಎಸ್. ಶಿವಪ್ರಕಾಶ್ ಮಾತನಾಡಿ, ‘ಸಮಾಜವಾದಿ ಕಲಾವಿದರಾಗಿದ್ದ ನಾಯರಿ ಅವರು, ಜೀವನದಲ್ಲಿ ರಾಜಿ ಮಾಡಿಕೊಂಡಿರಲಿಲ್ಲ. ರಂಗಭೂಮಿಯಲ್ಲಿ ಅನಿರೀಕ್ಷಿತ ಚಮತ್ಕಾರ ಮಾಡುತ್ತಿದ್ದರೂ ಜನಪ್ರಿಯರಾಗಲಿಲ್ಲ. ನಾಟಕ ಅಕಾಡೆಮಿಯ ಅಧ್ಯಕ್ಷ ಸ್ಥಾನವೂ ಸಿಗಲಿಲ್ಲ. ಅವರು, ಅಕಾಡೆಮಿ ಅಧ್ಯಕ್ಷರಾಗಿದ್ದರೆ ರಂಗಭೂಮಿಗೆ ಹೊಸ ಸ್ವರೂಪ ದೊರೆಯುತ್ತಿತ್ತು. ‌ಅವರ ಕಲಾ ಪ್ರತಿಭೆಗೆ ಪ್ರಶಸ್ತಿಗಳೂ ಬರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಲೇಖಕ ಜೆ.ಶ್ರೀನಿವಾಮೂರ್ತಿ, ‘ನಾಯರಿ ಅವರು ನನ್ನ ಬರವಣಿಗೆಗೆ ಪ್ರೇರಣೆ ಆಗಿದ್ದರು. ರಂಗಭೂಮಿಯಲ್ಲಿ ಅವರ ಪ್ರಯೋಗಗಳು ವಿಚಿತ್ರ ಮತ್ತು ವಿಶಿಷ್ಟವಾಗಿದ್ದವು. ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗ ಶಿಕ್ಷಣ ಪಡೆದ ಅವರು, ತಮ್ಮ ಜತೆಗಿದ್ದವರನ್ನು ಬೆಳೆಸುವ ಗುಣ ಹೊಂದಿದ್ದರು. ಅವರ ಜೀವನ ಯುವಜನರಿಗೆ ಪಾಠ ಆಗಲಿದೆ. ನಮ್ಮ ಎಲ್ಲ ಕೆಲಸದಲ್ಲಿ ಅವರನ್ನು ಕಾಣಬಹುದು. ನಮ್ಮ ಕಾಲದ ರಂಗಭೂಮಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ನಮ್ಮ ಬಗ್ಗೆ ನಾವು ಹಾಗೂ ಬೇರೆಯವರು ಬರೆಯಬೇಕು’ ಎಂದರು. ‌

ಪುಸ್ತಕ ತರಬೇಕು: ರಂಗಕರ್ಮಿ ಸಿ.ಕೆ. ಗುಂಡಣ್ಣ, ‘ನಾಯರಿ ಅವರ ಬದುಕಿನ ಹೋರಾಟವನ್ನು ಪುಸ್ತಕ ರೂಪದಲ್ಲಿ ತರಬೇಕು’ ಎಂದು ಹೇಳಿದರು.

‘ನಾಯರಿ ಅತ್ಯದ್ಭುತ ನಟ. ಅವರ ಜೀವನದ ಕಹಿ ಅನುಭವಗಳು ಅವರನ್ನು ಗಟ್ಟಿಗೊಳಿಸಿತು. ಇದರಿಂದ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಉದ್ಯೋಗ ತೊರೆದು, ನಾಗಪುರದ ಸಾಂಸ್ಕೃತಿಕ ಕೇಂದ್ರದಲ್ಲಿ ಕೆಲವು ಕಾಲ ಅಧಿಕಾರಿ ಆಗಿದ್ದರು. ಬಳಿಕ ಚಿತ್ರದುರ್ಗದ ಮುರುಘಾಮಠದ ನಾಟಕ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು. ಅನೇಕ ರಂಗ ತಂಡಗಳಿಗೆ ಅವರು ನೆರವಾಗಿದ್ದರು’ ಎಂದು ರಂಗಕರ್ಮಿ ಎಸ್. ರಘುನಂದನ್ ನೆನಪಿಸಿಕೊಂಡರು.

ರಂಗ ನಿರ್ದೇಶಕಿ ದಾಕ್ಷಾಯಿಣಿ ಭಟ್, ‘ಗೋಪಾಲಕೃಷ್ಣ ನಾಯರಿ ಅವರು ಹಲವು ಅನ್ಯಾಯಕ್ಕೆ ಒಳಗಾದ ಮತ್ತೊಬ್ಬ ಕರ್ಣನಾಗಿದ್ದಾರೆ. ಅವರ ಹಲವಾರು ನಾಟಕಗಳಿಗೆ ರಂಗ ಸಜ್ಜಿಕೆ ಮಾಡುತ್ತಾ, ರಂಗ ಶಿಕ್ಷಣವನ್ನು ಅವರಿಂದ ಕಲಿತೆ. ನಮ್ಮಲ್ಲಿ ವಿಶ್ವಾಸ ಮೂಡಿಸಿ, ಪ್ರೋತ್ಸಾಹಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.