
ಬೆಂಗಳೂರು: ‘ಕುಲ ಕುಲವೆಂದು ಹೊಡೆದಾಡದಿರಿ ಎಂದು ಕನಕದಾಸರು ಹೇಳಿದ್ದರೂ, ಮತ್ಯಾಕೆ ಜಾತಿವಾರು ಸಮೀಕ್ಷೆ ಮಾಡಬೇಕು. ನಾವು ನುಡಿದಂತೆ ನಡೆಯಲು ಏಕೆ ಸಾಧ್ಯವಾಗುತ್ತಿಲ್ಲ’ ಎಂದು ಚಲನಚಿತ್ರ ನಿರ್ದೇಶಕ ಟಿ. ಎಸ್. ನಾಗಾಭರಣ ಪ್ರಶ್ನಿಸಿದರು.
ಭಾರತೀಯ ವಿದ್ಯಾಭವನದ ವತಿಯಿಂದ ಸೋಮವಾರ ಆರಂಭವಾಗಿರುವ ಚಲನಚಿತ್ರ, ಪುಸ್ತಕಗಳು, ಉಪನ್ಯಾಸಗಳು, ಸಂಗೀತ, ನೃತ್ಯ, ನಾಟಕ, ವಿಚಾರಗೋಷ್ಠಿಗಳ 12 ದಿನಗಳ ಉತ್ಸವ ‘ಸಂತವಾಣಿ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಪರಂಪರೆಯಲ್ಲಿ ಶತಮಾನಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಮುಖ್ಯವಾಹಿನಿಯೊಂದು ನಿರಂತರವಾಗಿ ಹರಿಯುತ್ತಿದೆ. ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವ ವಾಹಿನಿ ಅದು. ಈ ವಾಹಿನಿ ಎಲ್ಲಿ? ಯಾಕೆ ಹಳಿತಪ್ಪಿದೆ? ಮತ್ತೆ ಹಳಿಗೆ ತರಲು ಏನು ಕೆಲಸ ಆಗಬೇಕು? ಎಂದು ಚಿಂತನೆ ಮಾಡಬೇಕು. ಸಂತವಾಣಿಗಳ ಸಮೀಕರಿಸಿದ ದೃಷ್ಟಿಕೋನದಿಂದ ಉತ್ತರ ಕಂಡುಕೊಳ್ಳಬೇಕು’ ಎಂದು ಹೇಳಿದರು.
‘ಕನಕದಾಸ, ಬಸವಣ್ಣ ಸೇರಿದಂತೆ ದಾರ್ಶನಿಕರನ್ನು ನಮ್ಮವರು ಎಂದು ಒಂದೊಂದು ಸಮುದಾಯಕ್ಕೆ ಸೀಮಿತಗೊಳಿಸುತ್ತಿದ್ದಾರೆ. ಬಸವಣ್ಣನವರ ದಯೆಯಿಲ್ಲದ ಧರ್ಮ ಯಾವುದಯ್ಯ ಎಂಬುದು ಹಿಂದೂ, ಮುಸ್ಲಿಂ, ಕ್ರಿಶ್ಷಿಯನ್ ಸೇರಿದಂತೆ ಎಲ್ಲ ಧರ್ಮಗಳಿಗೆ ಅನ್ವಯ ಆಗುವಂಥದ್ದು. ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ ಎಂದು ಕನಕದಾಸರು ಕೇಳಿದ್ದು ಕೂಡ ಒಂದು ಸಮುದಾಯಕ್ಕೆ ಅಲ್ಲ’ ಎಂದು ತಿಳಿಸಿದರು.
ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ‘ಎಲ್ಲ ಮೌಲ್ಯಗಳು ಅಪಮೌಲ್ಯಗೊಳ್ಳುತ್ತಿರುವ ಕಾಲದಲ್ಲಿ ಸಾತ್ವಿಕ ಶಕ್ತಿ ನಿಷ್ಕ್ರಿಯವಾಗಿ ತಾಮಸ ಶಕ್ತಿ ಹೆಚ್ಚಾಗಿದೆ. ಕುಬ್ಜರು, ನೀಚರು, ಭ್ರಷ್ಟರೇ ವಿಜೃಂಭಿಸುತ್ತಿದ್ದಾರೆ. ಅದಕ್ಕೆ ಎದುರಾಗಿ ನಮ್ಮ ಪರಂಪರೆಯ ಶ್ರೇಷ್ಠ ವ್ಯಕ್ತಿತ್ವಗಳ ಶ್ರೇಷ್ಠ ಚಿಂತನೆಗಳನ್ನು ನಮ್ಮ ವ್ಯಕ್ತಿತ್ವದಲ್ಲಿ ಆವಾಹಿಸಿಕೊಳ್ಳಬೇಕಿದೆ’ ಎಂದು ಹೇಳಿದರು.
‘ವಿಭಜಕ ಚಿಂತನೆಗಳ ವಿರುದ್ಧ ಸಂತವಾಣಿ ಮೂಲಕ ಎಲ್ಲರನ್ನೂ ಒಳಗೊಳ್ಳುವ, ಸಂಯೋಜನೆಗೊಳಿಸುವ ಕೆಲಸವಾಗುತ್ತಿದೆ. ಇಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಚಲನಚಿತ್ರ, ಉಪನ್ಯಾಸ, ವಿಚಾರಗೋಷ್ಠಿ ಹೀಗೆ ಎಲ್ಲ ಕಲಾಪ್ರಕಾರಗಳನ್ನು ಒಳಗೊಂಡಿವೆ. ಜೊತೆಗೆ ವಚನ ಪರಂಪರೆ, ಕೀರ್ತನೆ ಪರಂಪರೆ, ನಾಥ ಪರಂಪರೆ, ಇಸ್ಲಾಂ, ಕ್ರಿಶ್ಚಿಯನ್, ಜೈನ, ಬೌದ್ಧ ಹೀಗೆ ಎಲ್ಲ ಪರಂಪರೆಗಳನ್ನೂ ಒಳಗೊಳ್ಳುತ್ತಿದೆ. ಇದು ಈ ಹೊತ್ತಿನ ಅಗತ್ಯ’ ಎಂದು ವಿಶ್ಲೇಷಿಸಿದರು.
ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಜಿ. ರಾಘವನ್, ನಿರ್ದೇಶಕ ಎಚ್.ಎನ್. ಸುರೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.