ADVERTISEMENT

ತುಮಕೂರು ರಸ್ತೆ ಮೇಲ್ಸೇತುವೆ: ಐಐಎಸ್ಸಿ ತಂಡ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 16:35 IST
Last Updated 20 ಜನವರಿ 2022, 16:35 IST

ಬೆಂಗಳೂರು: ಅತ್ಯಂತ ವಾಹನ ದಟ್ಟಣೆ ಇರುವ ತುಮಕೂರು ರಸ್ತೆಯ ಎಲಿವೇಟೆಡ್‌ ಕಾರಿಡಾರ್‌ ಅನ್ನು (ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ತಜ್ಞರ ತಂಡ ಪರಿಶೀಲಿಸಿದೆ.

ಈ ಮೇಲ್ಸೇತುವೆಯ ಎರಡು ಪಿಲ್ಲರ್‌ಗಳನ್ನು ಸಂಪರ್ಕಿಸುವ ಕೇಬಲ್‌ನಲ್ಲಿ ದೋಷ ಕಂಡು ಬಂದಿದ್ದರಿಂದ ಡಿಸೆಂಬರ್‌ 25ರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ಎಐ) ವಾಹನ ಸಂಚಾರ ನಿರ್ಬಂಧಿಸಿ ದುರಸ್ತಿ ಕಾಮಗಾರಿ ಕೈಗೊಂಡಿತ್ತು.

ಕಾಮಗಾರಿ ನಡೆಯುತ್ತಿರುವ ಎಂಜಿನಿಯರ್‌ ತಂಡದೊಂದಿಗೆ ಐಐಎಸ್ಸಿ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಶೀಘ್ರ ವರದಿ ನೀಡುವ ಸಾಧ್ಯತೆ ಇದೆ.

ADVERTISEMENT

ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ತಜ್ಞರು ನೀಡುವ ಅಭಿಪ್ರಾಯದ ಅನ್ವಯ ರಸ್ತೆಯನ್ನು ಸಾರ್ವಜನಿಕರ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಬಹುತೇಕ ಒಂದು ವಾರದ ಒಳಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೇಲ್ಸೇತುವೆಯ ಎರಡು ಪಥಗಳಲ್ಲಿ ಪ್ರತಿ ದಿನ 50ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿದ್ದವು. ಸಂಚಾರಕ್ಕೆ ನಿರ್ಬಂಧ ವಿಧಿಸಿದ ಬಳಿಕ ಸರ್ವಿಸ್‌ ರಸ್ತೆಯಲ್ಲಿ ಪ್ರತಿ ನಿತ್ಯ ದಟ್ಟಣೆಯಾಗಿ ವಾಹನ ಚಾಲಕರು ಪರದಾಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.