ADVERTISEMENT

₹ 1,250 ಕೋಟಿ ವೆಚ್ಚದಲ್ಲಿ ಅವಳಿ ಗೋಪುರ ಕಟ್ಟಡ

ಸ್ಥಳ ಪರಿಶೀಲನೆ ನಡೆಸಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 16:15 IST
Last Updated 11 ಡಿಸೆಂಬರ್ 2020, 16:15 IST

ಬೆಂಗಳೂರು: ಪ್ರಮುಖ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ನಗರದ ಆನಂದರಾವ್‌ ವೃತ್ತದಲ್ಲಿ ₹ 1,250 ಕೋಟಿ ವೆಚ್ಚದಲ್ಲಿ 23.94 ಲಕ್ಷ ಚದರ ಅಡಿ ವಿಸ್ತೀರ್ಣದ 50 ಮಹಡಿಗಳ ಅವಳಿ ಗೋಪುರ ಕಟ್ಟಡ ನಿರ್ಮಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದರು.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಆನಂದರಾವ್‌ ವೃತ್ತದ ಎನ್‌.ಎಚ್‌. ಕಾಂಪೌಂಡ್‌ನಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ 8 ಎಕರೆ 20 ಗುಂಟೆ ಜಮೀನು ಇದೆ. ಇಲ್ಲಿ 1940ನೇ ಇಸವಿಗಿಂತ ಮೊದಲು ನಿರ್ಮಿಸಿದ ಕಟ್ಟಡಗಳಿವೆ. ಅವುಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲಾಗುವುದು‘ ಎಂದರು.

ಇದೇ ಜಮೀನಿನಲ್ಲಿ ₹ 400 ಕೋಟಿ ವೆಚ್ಚದಲ್ಲಿ 25 ಮಹಡಿಗಳ ಕಟ್ಟಡ ನಿರ್ಮಿಸಲು ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅನುದಾನ ಘೋಷಿಸಿದ್ದರು. ಈಗ ಯೋಜನೆಯನ್ನು ಬದಲಿಸಿ ರಾಷ್ಟ್ರೀಯ ನಿರ್ಮಾಣ ನಿಗಮ(ಎನ್‌ಬಿಸಿಸಿ)ದ ಸಹಭಾಗಿತ್ವದಲ್ಲಿ 50 ಮಹಡಿಗಳ ಅವಳಿ ಗೋಪುರ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ವಿವರ ನೀಡಿದರು.

ADVERTISEMENT

ಎನ್‌ಬಿಸಿಸಿ ಸಂಪೂರ್ಣ ವೆಚ್ಚ ಭರಿಸಲಿದೆ. ಕಟ್ಟಡದ ಶೇಕಡ 60ರಷ್ಟನ್ನು ಲೋಕೋಪಯೋಗಿ ಇಲಾಖೆಗೆ ನೀಡಲಿದ್ದು, ಶೇ 40ರಷ್ಟು ಜಾಗವನ್ನು ಎನ್‌ಬಿಸಿಸಿಗೆ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗುತ್ತದೆ. ಎನ್‌ಬಿಸಿಸಿ ತನ್ನ ಪಾಲಿನ ಜಾಗವನ್ನು ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಇತರರಿಗೆ ಬಾಡಿಗೆಗೆ ನೀಡಲಿದೆ ಎಂದರು.

ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವುದಕ್ಕೆ ಪೂರಕವಾಗಿ ಎನ್‌.ಎಚ್. ಕಾಂಪೌಂಡ್‌ನಲ್ಲಿರುವ ಸರ್ಕಾರಿ ಕಚೇರಿಗಳನ್ನು ಬಿ.ಟಿ.ಎಂ. ಬಡಾವಣೆಯಲ್ಲಿರುವ ಬಿಎಂಟಿಸಿ ಕಾಂಪ್ಲೆಕ್ಸ್‌ಗೆ ಸ್ಥಳಾಂತರಿಸಲಾಗುವುದು. ಸ್ಥಳಾಂತರಗೊಂಡ ಕಚೇರಿಗಳ ಬಾಡಿಗೆ ವೆಚ್ಚಕ್ಕೆ ₹ 14 ಕೋಟಿ ಅಗತ್ಯವಿದೆ ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ದಕ್ಷಿಣ ವಲಯದ ಮುಖ್ಯ ಎಂಜಿನಿಯರ್‌ ಶಿವಯೋಗಿ ಹಿರೇಮಠ್‌ ಸ್ಥಳ ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.