ADVERTISEMENT

₹ 2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: ಇಬ್ಬರು ಸೆರೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 19:36 IST
Last Updated 9 ಆಗಸ್ಟ್ 2021, 19:36 IST

ಬೆಂಗಳೂರು: ಮಾದಕ ವಸ್ತು ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿ ಸಿದ್ದು, ಅವರಿಂದ ₹ 2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

‘ರಾಜಸ್ಥಾನದ ಪಪ್ಪುರಾಮ್ ಅಲಿಯಾಸ್ ಪಪ್ಪು (20) ಹಾಗೂ ಚುನ್ನಿಲಾಲ್ (20) ಬಂಧಿತರು. ಅವರಿಂದ 1 ಕೆ.ಜಿ 820 ಗ್ರಾಂ ಬ್ರೌನ್‌ ಶುಗರ್, 859 ಗ್ರಾಂ ಎಂಡಿಎಂಎ, 1 ಕೆ.ಜಿ 700 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಿ.ಎ ವ್ಯಾಸಂಗ ಮಾಡುತ್ತಿದ್ದ ಆರೋಪಿ ಪಪ್ಪು, ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದ್ದ. ಚುನ್ನಿಲಾಲ್ ಜೊತೆ ಸೇರಿ ಮಾದಕ ವಸ್ತು ಮಾರಲು ಆರಂಭಿಸಿದ್ದ. ರಾಜಸ್ಥಾನದಿಂದ ರೈಲಿನಲ್ಲಿ ಬೆಂಗಳೂರಿಗೆ ಮಾದಕ ವಸ್ತು ತರುತ್ತಿದ್ದ ಆರೋಪಿಗಳು, ಪರಿಚಯಸ್ಥ ಗ್ರಾಹಕರಿಗೆ ಮಾರುತ್ತಿದ್ದರು. ಕೆಲ ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿಗಳು ಹಾಗೂ ಕೆಲ ಕಾಲೇಜು ವಿದ್ಯಾರ್ಥಿಗಳು ಗ್ರಾಹಕರಿದ್ದರು’ ಎಂದೂ ಪೊಲೀಸರು ತಿಳಿಸಿದರು.

ADVERTISEMENT

‘ಗೋಡೌನ್ ಸ್ಟ್ರೀಟ್‌ನಲ್ಲಿ ಭಾನುವಾರ ಸಂಜೆ ಓಡಾಡುತ್ತಿದ್ದ ಆರೋಪಿಗಳು ಡ್ರಗ್ಸ್ ಮಾರಲು ಯತ್ನಿಸು ತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳ ಮನೆ ಮೇಲೂ ದಾಳಿ ಮಾಡಿ ಡ್ರಗ್ಸ್ ಪತ್ತೆ ಮಾಡಲಾಗಿದೆ’ ಎಂದೂ ವಿವರಿಸಿದರು.

‘ನಗರದ ಹೊರವಲಯದ ಚಂದಾಪುರ, ಆನೇಕಲ್ ಹಾಗೂ ಸುತ್ತಮುತ್ತ ಬಾಡಿಗೆ ಮನೆಯಲ್ಲಿ ಆರೋಪಿಗಳು ವಾಸವಿರುತ್ತಿದ್ದರು. ಪೊಲೀಸರಿಗೆ ಸುಳಿವು ಸಿಗಬಾರದೆಂದು ಮೂರು ತಿಂಗಳಿಗೊಮ್ಮೆ ಮನೆ ಹಾಗೂ ಸಿಮ್‌ಕಾರ್ಡ್ ಬದಲಾಯಿಸುತ್ತಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.