ಬೆಂಗಳೂರು: ಮಹದೇವಪುರ ಠಾಣೆ ವ್ಯಾಪ್ತಿಯ ಹೂಡಿ ಬಳಿ ಶಿಥಿಲಗೊಂಡಿದ್ದ ಕೊಠಡಿಯೊಂದರ ಚಾವಣಿ ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
‘ಬಿಹಾರದ ಅರ್ಮಾನ್ (28) ಹಾಗೂ ಜೈನುದ್ದೀನ್ (37) ಮೃತರು. ಮಂಗಳವಾರ ನಸುಕಿನಲ್ಲಿ ಸಂಭವಿಸಿದ ಘಟನೆಯಲ್ಲಿ ಮೂವರು ಕಾರ್ಮಿಕರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಹೂಡಿ ಗ್ರಾಫೈಟ್ ಇಂಡಿಯಾ ಕಂಪನಿ ಬಳಿ ಹಳೇ ಕಟ್ಟಡವಿದ್ದು, ಅದರ ತೆರವು ಕೆಲಸಕ್ಕೆಂದು ಕಾರ್ಮಿಕರು ಬಂದಿದ್ದರು. ಕಟ್ಟಡವನ್ನು ತೆರವು ಮಾಡುತ್ತ, ಅವಶೇಷ ಸಾಗಿಸುವ ಕೆಲಸ ಮಾಡುತ್ತಿದ್ದರು. ಕಟ್ಟಡದ ಎದುರಿನ ಖುಲ್ಲಾ ಜಾಗದಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ಕಾರ್ಮಿಕರು ಉಳಿದುಕೊಂಡಿದ್ದರು. ರಾತ್ರಿಯೂ ಅಲ್ಲಿ ಯೇ ಮಲಗುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.
ಮಳೆ ಬಂದಿದ್ದರಿಂದ ಕೊಠಡಿಯಲ್ಲಿ ನಿದ್ದೆ: ‘ಕಟ್ಟಡದ ಆವರಣದಲ್ಲಿ ಶಿಥಿಲಗೊಂಡಿರುವ ಕೊಠಡಿ ಇದ್ದು, ಮಳೆ ಬಂದಾಗ ಅಲ್ಲಿಯೇ ಕಾರ್ಮಿಕರು ಮಲಗುತ್ತಿದ್ದರು. ಸೋಮವಾರ ರಾತ್ರಿ ಎಂದಿನಂತೆ ಖುಲ್ಲಾ ಜಾಗದಲ್ಲಿ ಐವರು ಕಾರ್ಮಿಕರು ಮಲಗಿದ್ದರು. ಜೋರು ಮಳೆ
ಬಂದಿದ್ದರಿಂದ, ಕೊಠಡಿಯೊಳಗೆ ಹೋಗಿ ಮಲಗಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.
‘ಮಂಗಳವಾರ ನಸುಕಿನಲ್ಲಿ ಕಟ್ಟಡದ ಅವಶೇಷ, ಕೊಠಡಿಯ ಚಾವಣಿ ಮೇಲೆ ಬಿದ್ದಿತ್ತು. ಚಾವಣಿಯಡಿ
ಐವರು ಕಾರ್ಮಿಕರು ಸಿಲುಕಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಜತೆ ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಲಾಯಿತು. ಮೂವರು ಕಾರ್ಮಿಕರನ್ನು ರಕ್ಷಿಸಲಾಯಿತು. ಅರ್ಮಾನ್ ಹಾಗೂ ಜೈನುದ್ದೀನ್ ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತದೇಹವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.