ADVERTISEMENT

ಕೌಟುಂಬಿಕ ಕಲಹ: ಇಬ್ಬರು ಮಹಿಳೆಯರ ಕೊಲೆ

ಪ್ರತ್ಯೇಕ ಪ್ರಕರಣ: ಪತಿಯಂದಿರನ್ನು ಬಂಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 19:35 IST
Last Updated 26 ಮಾರ್ಚ್ 2022, 19:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಮಮೂರ್ತಿನಗರ ಹಾಗೂ ಬ್ಯಾಡರಹಳ್ಳಿ ಠಾಣೆಗಳ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರ ಕೊಲೆ ನಡೆದಿದ್ದು, ಈ ಸಂಬಂಧ ಅವರ ಪತಿಯಂದಿರನ್ನು ಪೊಲೀಸರು ಬಂಧಿಸಿದ್ದಾರೆ.

‘ಬಿ. ಚನ್ನಸಂದ್ರದಲ್ಲಿ ಕಮಲಾದೇವಿ (45) ಹಾಗೂ ಮುನೇಶ್ವರನಗರದಲ್ಲಿ ಸೌಮ್ಯಾ (25) ಎಂಬುವರ ಕೊಲೆ ಆಗಿದೆ. ಕೃತ್ಯ ಎಸಗಿದ್ದ ಆರೋಪದಡಿ ತೇಜ್ ಬಹದ್ದೂರ್ ಜಪ್ರೇಲ್ (52) ಹಾಗೂ ಯೋಗೀಶ್ (28) ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ನೇಪಾಳದಿಂದ ಬಂದು ವಾಸ: ‘ನೇಪಾಳದ ಕಮಲಾದೇವಿ, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಬಿ. ಚನ್ನಸಂದ್ರದಲ್ಲಿ ನೆಲೆಸಿದ್ದರು. ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಪತಿ ತೇಜ್‌ ಬಹದ್ದೂರ್‌ ಅವರೇ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಕಮಲಾದೇವಿ ಹಾಗೂ ತೇಜ್ ಬಹದ್ದೂರ್, 20 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಜೊತೆ ತೇಜ್‌ ಬಹದ್ದೂರ್, ನೇಪಾಳದಲ್ಲೇ ನೆಲೆಸಿದ್ದರು. ಕಮಲಾದೇವಿ, ಗಂಡು ಮಗನ ಜೊತೆ ಬೆಂಗಳೂರಿನಲ್ಲಿ ವಾಸವಿದ್ದರು. ಮಗ ಅಂಗಡಿಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದ’ ಎಂದೂ ಹೇಳಿದರು.

‘ನಾಲ್ಕು ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ ತೇಜ್‌ ಬಹದ್ದೂರ್, ನಿತ್ಯವೂ ಪತ್ನಿ ಜೊತೆ ಜಗಳ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ಜಗಳ ವಿಕೋಪಕ್ಕೆ ಹೋಗಿತ್ತು. ಅವಾಗಲೇ ಆರೋಪಿ, ಪತಿಯನ್ನು ಕೊಂದಿದ್ದರು’ ಎಂದೂ ಪೊಲೀಸರು ತಿಳಿಸಿದರು.

ವರದಕ್ಷಿಣಿ ತರದಿದ್ದಕ್ಕೆ ಕೊಲೆ: ‘ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯ ಮುನೇಶ್ವರ ನಗರದಲ್ಲಿ ಸೌಮ್ಯಾ ಕೊಲೆ ಆಗಿದ್ದು, ಪತಿ ಯೋಗೀಶ್ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸೌಮ್ಯಾ ಹಾಗೂ ಯೋಗೀಶ್, ಪರಸ್ಪರ ಪ್ರೀತಿಸಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಪತಿ, ವರದಕ್ಷಿಣಿ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದರು. ಇದೇ ವಿಚಾರವಾಗಿ ಜಗಳವೂ ನಡೆಯುತ್ತಿತ್ತು. ಶುಕ್ರವಾರ ಸಂಜೆ ಜಗಳ ತೆಗೆದಿದ್ದ ಆರೋಪಿ, ಸೌಮ್ಯಾ ಅವರ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಕೊಲೆ ಮಾಡಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.