ADVERTISEMENT

ನೈಜೀರಿಯಾ ಪ್ರಜೆ ಸೇರಿ ಇಬ್ಬರ ಕೊಲೆ

​ಪ್ರಜಾವಾಣಿ ವಾರ್ತೆ
Published 9 ಮೇ 2020, 19:31 IST
Last Updated 9 ಮೇ 2020, 19:31 IST

ಬೆಂಗಳೂರು: ನಗರದ ಎರಡು ಕಡೆಗಳಲ್ಲಿ ಶುಕ್ರವಾರ ರಾತ್ರಿ ಸ್ನೇಹಿತರ ನಡುವೆ ಜಗಳ ಆಗಿದ್ದು, ನೈಜೀರಿಯಾ ಪ್ರಜೆ ಸೇರಿ ಇಬ್ಬರನ್ನು ಕೊಲೆ ಮಾಡಲಾಗಿದೆ.

ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ನೈಜೀರಿಯಾದ ಜಾನ್‌ ಸಂಡೆ (30) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

‘ಉದ್ಯೋಗ ವೀಸಾದಡಿ ನಗರಕ್ಕೆ ಬಂದಿದ್ದ ಜಾನ್, ಕಾಚರಕನಹಳ್ಳಿಯಲ್ಲಿ ವಾಸವಿದ್ದರು. ಶುಕ್ರವಾರ ರಾತ್ರಿ ಸ್ನೇಹಿತ ಮನೋಜ್‌ ಎಂಬುವರ ಮನೆಗೆ ಹೋಗಿದ್ದ ಅವರು ಮದ್ಯದ ಪಾರ್ಟಿ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಮದ್ಯದ ಅಮಲಿನಲ್ಲಿ ಅವರಿಬ್ಬರ ನಡುವೆ ಜಗಳ ಶುರುವಾಗಿತ್ತು. ಅದೇ ವೇಳೆ ಜಾನ್, ತನ್ನ ಬಳಿಯ ಚಾಕುವಿನಿಂದ ಮನೋಜ್‌ನ ಹೊಟ್ಟೆಗೆ ಇರಿದಿದ್ದ. ಪ್ರತಿ ದಾಳಿ ನಡೆಸಿದ್ದ ಮನೋಜ್, ಅದೇ ಚಾಕು ಕಿತ್ತುಕೊಂಡು ಜಾನ್‌ಗೆ ಇರಿದು ಕೊಂದಿದ್ದಾನೆ’.

‘ಗಾಯಗೊಂಡಿರುವ ಮನೋಜ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ’ ಎಂದು ಪೊಲೀಸರು ತಿಳಿಸಿದರು.

ಜಾಮೀನು ಮೇಲೆ ಬಿಡುಗಡೆಯಾಗಿದ್ದವನ ಕೊಲೆ: ಐದು ದಿನಗಳ ಹಿಂದಷ್ಟೇ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾಗಿದ್ದ ಅರುಣ್‌ ಎಂಬಾತನನ್ನು ಆತನ ಸ್ನೇಹಿತರೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೃತ್ಯದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

‘ಕೆಂಪೇಗೌಡ ನಗರ ನಿವಾಸಿ ಅರುಣ್ (30) ವಿರುದ್ಧ ಕಾಮಾಕ್ಷಿಪಾಳ್ಯ ಹಾಗೂ ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಆತ, ಶುಕ್ರವಾರ ರಾತ್ರಿ 7.30ರ ಸುಮಾರಿಗೆ ಸ್ನೇಹಿತರನ್ನು ಮಾತನಾಡಿಸಲು ಹೋಗಿದ್ದ’ ಎಂದು ಪೊಲೀಸರು ಹೇಳಿದರು.

‘ಅದೇ ಸಂದರ್ಭ ಸ್ನೇಹಿತರ ನಡುವೆ ಜಗಳ ಆರಂಭವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ನೇಹಿತರು ಚಾಕುವಿನಿಂದ ಇರಿದು ಅರುಣ್‌ನನ್ನು ಕೊಂದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.