ADVERTISEMENT

ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಋಣಮುಕ್ತ ಕಾಯ್ದೆ ಜಾರಿಗೆ ತರಲಿ: ಯು. ಬಸವರಾಜ 

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 8:55 IST
Last Updated 15 ಸೆಪ್ಟೆಂಬರ್ 2022, 8:55 IST
   

ಹೊಸಪೇಟೆ (ವಿಜಯನಗರ): ‘ಕೇರಳದ ಮಾದರಿಯಲ್ಲಿ ರಾಜ್ಯದಲ್ಲಿ ಋಣಮುಕ್ತ ಕಾಯ್ದೆ ಜಾರಿಗೆ ತರಬೇಕು’ ಎಂದು ಸಿ.ಪಿ.ಐ.ಎಂ. ರಾಜ್ಯ ಘಟಕದ ಕಾರ್ಯದರ್ಶಿ ಯು. ಬಸವರಾಜ ಆಗ್ರಹಿಸಿದರು.
ಅತಿವೃಷ್ಟಿ, ಅನಾವೃಷ್ಟಿ, ಇತರೆ ಅವಘಡಗಳು ಸಂಭವಿಸಿದಾಗ ರೈತರು, ಕೃಷಿ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಒಳಗಾದರೆ ಅವರು ಋಣಮುಕ್ತ ಕಾಯ್ದೆ ಅಡಿಯಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು. ಅದನ್ನು ಪರಿಶೀಲಿಸಿ ತಕ್ಷಣವೇ ಕೇರಳದಲ್ಲಿ ಪರಿಹಾರ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಕಾಯ್ದೆ ಜಾರಿಗೆ ತರಬೇಕು ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕೇಂದ್ರ ಸರ್ಕಾರದ ದುರಾಡಳಿತದಿಂದ ರೈತರು, ಕೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಆದರೆ, ರಾಜ್ಯ ಸರ್ಕಾರ ಅದರ ಅನುಷ್ಠಾನಕ್ಕೆ ಮುಂದಾಗಿದೆ. ಕಾಯ್ದೆ ಜಾರಿಗೆ ಬಂದರೆ ಗ್ರಾಮೀಣರು ಬೀದಿಗೆ ಬೀಳುತ್ತಾರೆ. ಕಾರ್ಮಿಕರಿಗೆ ಮಾಸಿಕ ಕನಿಷ್ಠ ₹26 ಸಾವಿರ ವೇತನ ನೀಡಬೇಕೆಂಬ ಬೇಡಿಕೆಗೆ ರಾಜ್ಯ ಸರ್ಕಾರ ಇದುವರೆಗೆ ಸ್ಪಂದಿಸಿಲ್ಲ ಎಂದು ಟೀಕಿಸಿದರು.
ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಉಳುಮೆ ಮಾಡುವವರಿಗೆ ಹೆಚ್ಚಿನ ಒತ್ತು ಕೊಡಬೇಕು. ನರೇಗಾ ಕೂಲಿ ದಿನಗಳನ್ನು 200 ದಿನಕ್ಕೆ ಹೆಚ್ಚಿಸಬೇಕು. ಪ್ರತಿ ದಿನದ ಕೂಲಿ ₹600ಕ್ಕೆ ಏರಿಸಬೇಕು. ನರೇಗಾ ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ಹೊಸ ಶಿಕ್ಷಣ ನೀತಿ ಹಿಂಪಡೆದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಪಡಿಸಬೇಕು. ‘ಪ್ರೀಪೇಯ್ಡ್‌’ ಮೀಟರ್‌ ಕೂರಿಸುವ ಪ್ರಸ್ತಾವ ಕೈಬಿಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಶೇ 40ರಷ್ಟು ಕಮಿಷನ್‌ ಸರ್ವೇ ಸಾಮಾನ್ಯವಾಗಿದೆ. ಇದೇ ವಿಷಯದಲ್ಲಿ ಕೆ.ಎಸ್‌. ಈಶ್ವರಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಕೋಮುಸೌಹಾರ್ದ ಹಾಳುಗೆಡವಲಾಗುತ್ತಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದು, ಅವರ ಚಿತ್ತ ಬೇರೆಡೆ ಸೆಳೆಯಲು ಧರ್ಮ ಧರ್ಮಗಳ ನಡುವೆ ಜಗಳ ಹಚ್ಚಲಾಗುತ್ತಿದೆ ಎಂದು ಆರೋಪಿಸಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಆರ್‌.ಎಸ್‌. ಬಸವರಾಜ, ಜಿಲ್ಲಾ ಕಾರ್ಯದರ್ಶಿ ಭಾಸ್ಕರ್‌ ರೆಡ್ಡಿ, ಮರಡಿ ಜಂಬಯ್ಯ ನಾಯಕ, ಬಿ. ಮಾಳಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.