ADVERTISEMENT

ಕುಡಿದ ಮತ್ತಿನಲ್ಲಿದ್ದ ಉಬರ್‌ ಚಾಲಕ: ಪ್ರಯಾಣಿಕರಿಂದಲೇ ಕ್ಯಾಬ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2018, 19:05 IST
Last Updated 15 ಸೆಪ್ಟೆಂಬರ್ 2018, 19:05 IST
ಉಬರ್‌ ಕ್ಯಾಬ್‌– ಸಾಂದರ್ಭಿಕ ಚಿತ್ರ
ಉಬರ್‌ ಕ್ಯಾಬ್‌– ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾತ್ರೋರಾತ್ರಿ ಏನಾದರೂ ಉಬರ್‌ ಕ್ಯಾಬ್‌ ಬುಕ್‌ ಮಾಡಬೇಕೆಂದಿದ್ದರೇ ಸ್ವಲ್ಪ ಯೋಚಿಸಿ. ನೀವೇ ಕ್ಯಾಬ್‌ ಚಲಾಯಿಸಿಕೊಂಡು ಹೋಗಬೇಕಾದ ಸ್ಥಿತಿ ಬರುತ್ತದೆ!

–ಇದೇನಪ್ಪ ಎಂದು ಕಣ್ಣರಳಿಸುತ್ತೀದ್ದೀರಾ. ಇದನ್ನು ಹೇಳುತ್ತಿರುವುದು ನಾವಲ್ಲ.ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಬರ್ ಕ್ಯಾಬ್‌ ಬುಕ್‌ ಮಾಡಿ ಪೇಚಿಗೆ ಸಿಲುಕಿದ ಸೂರ್ಯ ಒರುಗಂಟಿ ಅವರ ಆಶಯವಿದು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್‌ ಬುಕ್‌ ಮಾಡಿ ಕಾಯುತ್ತಿದ್ದ ಸೂರ್ಯ ಅವರಿಗೆ ಅಚ್ಚರಿಗಳು ಕಾದಿದ್ದವು. ಮೊದಲನೆಯದು ಆ್ಯಪ್‌ನಲ್ಲಿ ಕಂಡ ಚಾಲಕನೇ ಬೇರೆ, ಸ್ಥಳಕ್ಕೆ ಬಂದ ವಾಹನದಲ್ಲಿದ್ದ ಚಾಲಕನೇ ಬೇರೆಯಾಗಿದ್ದು. ಅದರ ಜೊತೆಗೆ ಬಂದ ಆ ಚಾಲಕ ಕುಡಿದ ಮತ್ತಿನಲ್ಲಿ ತೂರಾಡುತ್ತಿದ್ದದ್ದು. ಹೀಗೆಕ್ಯಾಬ್ ಬುಕ್ ಮಾಡಿ ಪೇಚಾಟಕ್ಕೆ ಸಿಲುಕಿದ ಸೂರ್ಯ ಅವರು ಕೊನೆಗೆ ವಿಮಾನ ನಿಲ್ದಾಣದಿಂದ ತನ್ನ ಮನೆಗೆ ಕ್ಯಾಬ್ ಚಲಾಯಿಸಿಕೊಂಡು ಹೋಗಿದ್ದಾರೆ .

ADVERTISEMENT

ಸೆ.10ರಂದು ಈ ಘಟನೆ ನಡೆದಿದೆ. ಚಾಲಕನ ದುರ್ವತೆನೆಯಿಂದ ಬೇಸರಗೊಂಡ ಸೂರ್ಯ ಅವರು ಈ ಬಗ್ಗೆ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಲಕನನ್ನು ಪ್ಯಾಸೆಂಜರ್ ಸೀಟಿನಲ್ಲಿ ಕೂರಿಸಿ ಕಾರು ಚಾಲನೆ ಮಾಡಿದಾಗಲೂ ಆತನಿಗೆ ಈ ಬಗ್ಗೆ ತಿಳಿಯಲಿಲ್ಲ ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ. ಇದನ್ನು ಉಬರ್ ಸೇಫ್ಟಿ ಟೀಂಗೂ ಟ್ಯಾಗ್‌ ಮಾಡಿದ್ದಾರೆ.

20 ತಾಸುಗಳ ನಂತರ ಪ್ರತಿಕ್ರಿಯಿಸಿದ ಉಬರ್‌ ಸಮೂಹ‘ಭದ್ರತಾ ದೃಷ್ಟಿಯಿಂದ ನೀವು ಕ್ಯಾಬ್ ಚಾಲನೆ ಮಾಡಬೇಡಿ’ ಎಂಬ ಉತ್ತರವನ್ನು ನೀಡಿದೆ. ಜೊತೆಗೆ ಕ್ಯಾಬ್‌ ಚಾಲಕನಿಗೆ ಪಾಠ ಕಲಿಸುವುದಾಗಿಯೂ ಅವರು ಹೇಳಿದೆ ಎಂಬುದನ್ನೂ ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಖಾಸಗಿ ಕ್ಯಾಬ್‌ಗಳು ಸುರಕ್ಷಿತವಲ್ಲ ಎನ್ನುವ ವಾದಕ್ಕೆ ಈ ಪ್ರಕರಣ ಸಾಕ್ಷ್ಯ ಒದಗಿಸಿದ್ದು, ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸಾಕಷ್ಟು ಮಂದಿ ಟೀಕೆ ವ್ಯಕ್ತಪಡಿಸಿದ್ದಾರೆ. ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಒಬ್ಬರುತನಗೂ ಇದೇ ರೀತಿ ತೊಂದರೆ ಆಗಿತ್ತು ಎಂದು ಹೇಳಿದ್ದಾರೆ. ‘ಪ್ರಯಾಣಿಕನ ನೋವು ನನಗೆ ಅರ್ಥವಾಗುತ್ತದೆ. ಏಕೆಂದರೆ, ನನಗೂ ಒಮ್ಮೆ ಹೀಗೆ ಆಗಿತ್ತು. ನಗರದಲ್ಲಿ ಸ್ಥಳೀಯ ಸಾರಿಗೆ ವ್ಯವಸ್ಥೆ ಸರಿಯಿಲ್ಲದಿರುವ ಪರಿಣಾಮ ನಾವು ಇದನೆಲ್ಲ ಎದುರಿಸಬೇಕಾಗಿದೆ. ಎಲ್ಲಾ ಕ್ಯಾಬ್‌ ಚಾಲಕರು ವಿಶ್ರಾಂತಿ ಪಡೆಯದೆ ದುಡಿಯುತ್ತಿದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.