ADVERTISEMENT

ಉಬರ್‌ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 20:17 IST
Last Updated 12 ಫೆಬ್ರುವರಿ 2020, 20:17 IST
   

ಬೆಂಗಳೂರು: ಉಬರ್‌ನಲ್ಲಿ ಪ್ರಯಾಣಿಸುತ್ತಿದ್ದ 25 ವರ್ಷದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಚಾಲಕನೊಬ್ಬ ಪೊಲೀಸರು ಹಾಗೂ ಕಾರು ಕಂಪನಿಗೆ ದೂರು ನೀಡುವುದಿಲ್ಲ ಎಂದು ಖಾತ್ರಿ ನೀಡಿದ ಬಳಿಕವಷ್ಟೆ ಬಿಡುಗಡೆ ಮಾಡಿರುವ ಘಟನೆ ಇತ್ತೀಚೆಗೆ ನಗರದಲ್ಲಿ ನಡೆದಿದೆ.

ಚಾಲಕನ ವರ್ತನೆಯಿಂದ ತೀವ್ರ ಆಘಾತಕ್ಕೆ ಒಳಗಾಗಿರುವ ಮಹಿಳೆ ತಮ್ಮ ಗೆಳತಿಯರೊಂದಿಗೆ ಆಘಾತಕಾರಿ ಘಟನೆ ಹಂಚಿಕೊಂಡು, ಅವರ ಸಲಹೆ ಪಡೆದ ಬಳಿಕ ಕೆ.ಆರ್‌.‍ಪುರಂ ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದಾರೆ.

ಟಿ.ಸಿ ಪಾಳ್ಯ ನಿವಾಸಿಯಾದ ಮಹಿಳೆ ತಮ್ಮ ಗೆಳತಿಯರನ್ನು ಭೇಟಿ ಮಾಡಲು ಫೆಬ್ರುವರಿ 1ರಂದು ಹೆಬ್ಬಾಳಕ್ಕೆ ಹೋಗಿದ್ದರು. ಸಂಜೆ 6.30ರ ಸುಮಾರಿಗೆ ವಾಪಸ್‌ ಬರಲು ಕ್ಯಾಬ್‌ (ಕೆಎ 53 ಬಿ 8416) ಬುಕ್‌ ಮಾಡಿದರು. ಕ್ಯಾಬ್‌ ಚಾಲಕ ರಾಮ್‌ ಮೋಹನ್‌ ಜಿ. ಎಂಬಾತ ಅವರನ್ನು ಕ್ಯಾಬ್‌ನಲ್ಲಿ ಕೂರಿಸಿಕೊಂಡ. ಸಂಜೆ 7.15ರ ಸುಮಾರಿಗೆ ಟಿ.ಸಿ ಪಾಳ್ಯ ಸರ್ಕಲ್‌ಗೆ ಬಂದಾಗ ಚಾಲಕ ಹಠಾತ್ತನೇ ತನ್ನ ಸೀಟನ್ನು ಹಿಂದಕ್ಕೆ ತಳ್ಳಿ ತಮ್ಮ ಕಾಲು ಮುಟ್ಟಲಾರಂಭಿಸಿದ. ಆನಂತರ ಟಿ ಷರ್ಟ್‌ನೊಳಗೆ ಕೈ ಹಾಕಲು ಯತ್ನಿಸಿದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ADVERTISEMENT

‘ಚಾಲಕನ ಅಸಭ್ಯ ವರ್ತನೆಯಿಂದ ಭಯಗೊಂಡ ನಾನು ಕ್ಯಾಬ್‌ನಿಂದ ಹೊರ ಜಿಗಿಯಲು ಪ್ರಯತ್ನಿಸಿದೆ. ಆನಂತರ ಕ್ಷಮೆ ಯಾಚಿಸಿದ ಚಾಲಕ ಪೊಲೀಸರಿಗೆ ದೂರು ನೀಡದಂತೆ ಮನವಿ ಮಾಡಿದರು. ಆತನ ಮನವಿಗೆ ಪ್ರತಿಕ್ರಿಯಿಸದಿದ್ದಾಗ ಕ್ಯಾಬ್‌ ಅನ್ನು ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಹೋದರು. ಬೇರೆ ದಾರಿ ಇಲ್ಲದೆ ಪೊಲೀಸರಿಗೆ ಮತ್ತು ಉಬರ್‌ ಕಂಪನಿಗೆ ದೂರು ನೀಡುವುದಿಲ್ಲ ಎಂಬ ಭರವಸೆ ಕೊಟ್ಟ ಬಳಿಕ ನನ್ನನ್ನು 8 ಗಣಟೆ ಸುಮಾರಿಗೆ ಕಾರಿನಿಂದ ಇಳಿಸಿದರು. 45 ನಿಮಿಷಗಳ ಅವಧಿಯಲ್ಲಿ ಇದು ನಡೆಯಿತು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತ ಪ್ರತಿಕ್ರಿಯೆಗೆ ಉಬರ್‌ ಕಂಪನಿ ಪ್ರತಿನಿಧಿಗಳು ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.