ADVERTISEMENT

ಉಬರ್ ಕ್ಯಾಬ್ ಕಾಯ್ದಿರಿಸಿದ್ದ ಟೆಕಿ ಮೇಲೆ ಹಲ್ಲೆ: ದೂರು ದಾಖಲು

ಶುಲ್ಕದ ವಿಚಾರವಾಗಿ ಗಲಾಟೆ; ಚಾಲಕನ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 18:49 IST
Last Updated 8 ಅಕ್ಟೋಬರ್ 2019, 18:49 IST
   

ಬೆಂಗಳೂರು:‌ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಉಬರ್ ಕ್ಯಾಬ್ ಕಾಯ್ದಿರಿಸಿದ್ದ ಅನೇಕ್‌ ರಾಯ್‌ (23) ಎಂಬುವರ ಮೇಲೆ ಅದೇ ಕ್ಯಾಬ್‌ ಚಾಲಕ ಹಲ್ಲೆ ಮಾಡಿದ್ದು, ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಇದೇ 3ರಂದು ನಡೆದಿರುವ ಘಟನೆ ಬಗ್ಗೆ ಅನೇಕ್‌ ರಾಯ್ ಅವರೇ ದೂರು ನೀಡಿದ್ದಾರೆ. ಅವರ ಮೇಲೆ ಹಲ್ಲೆ ಮಾಡಿರುವ ಚಾಲಕ ಕೆ.ಎಸ್‌. ಹರೀಶ್ ಎಂದು ಗೊತ್ತಾಗಿದ್ದು, ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆತ ಸದ್ಯ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅನೇಕ್‌ ರಾಯ್, ಮಹ ದೇವಪುರದಲ್ಲಿ ವಾಸವಿದ್ದಾರೆ. ದುರ್ಗಾಪೂಜೆಗೆಂದು ಕೋಲ್ಕತ್ತಕ್ಕೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದ ಅವರು ವಿಮಾನ ಟಿಕೆಟ್ ಕಾಯ್ದಿರಿ ಸಿದ್ದರು. ಇದೇ 3ರಂದು ಸಂಜೆ ಮನೆಯಿಂದ ಕೆಂಪೇಗೌಡ ನಿಲ್ದಾಣಕ್ಕೆ ಹೋಗಲು ಉಬರ್ ಕ್ಯಾಬ್ ಬುಕ್ ಮಾಡಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ಸ್ಥಳಕ್ಕೆ ಬಂದಿದ್ದ ಚಾಲಕ, ಪ್ರಯಾಣ ಶುಲ್ಕವನ್ನು ಮುಂಗಡವಾಗಿ ನೀಡುವಂತೆ ಹೇಳಿದ್ದ. ಇಲ್ಲದಿದ್ದರೆ ಬುಕ್ಕಿಂಗ್ ರದ್ದುಪಡಿಸುವುದಾಗಿಯೂ ತಿಳಿಸಿದ್ದ. ಅದಕ್ಕೆ ಅನೇಕ್ ರಾಯ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆದಿತ್ತು.’

‘ಬುಕ್ಕಿಂಗ್ ರದ್ದುಪಡಿಸಿದ್ದ ಚಾಲಕ ಕ್ಯಾಬ್‌ನ ಡಿಕ್ಕಿಯಲ್ಲಿದ್ದ ಬ್ಯಾಗ್‌ಗಳನ್ನು ಹೊರಗೆ ಎಸೆಯುತ್ತಿದ್ದ. ಬ್ಯಾಗ್‌ ತೆಗೆದು ಕೊಳ್ಳಲು ಹೋದಾಗ ಅನೇಕ್‌ ರಾಯ್ ಮೇಲೆಯೇ ಚಾಲಕ ಹಲ್ಲೆ ಮಾಡಿದ್ದ. ಅದರಿಂದಾಗಿ ಮೂಗಿನಲ್ಲಿ ರಕ್ತ ಸೋರಲಾರಂಭಿಸಿತ್ತು. ಮಣಿಪಾಲ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡ ಬಳಿಕವೇ ಅನೇಕ್‌ ರಾಯ್ ಮಹದೇವಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಕೋಲ್ಕತ್ತದಲ್ಲಿ ದೂರುದಾರ

‘ದೂರು ನೀಡಿದ ಬಳಿಕ ಅನೇಕ್‌ ರಾಯ್ ಕೋಲ್ಕತ್ತಕ್ಕೆ ಹೋಗಿದ್ದು, ಇದುವರೆಗೂ ವಾಪಸು ಬಂದಿಲ್ಲ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕಾಗಿದ್ದು, ಅವರು ನಗರಕ್ಕೆ ಬರುವುದನ್ನು ಕಾಯುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.