ADVERTISEMENT

ಯುಗಾದಿ: ಮಾರುಕಟ್ಟೆಗಳಲ್ಲಿ ತಗ್ಗಿದ ಗ್ರಾಹಕರು

ಕೊರೊನಾದಿಂದ ವ್ಯಾಪಾರ ನೀರಸ * ಗ್ರಾಹಕರ ನಿರೀಕ್ಷೆಯಲ್ಲಿ ವ್ಯಾಪಾರಿಗಳು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 20:52 IST
Last Updated 11 ಏಪ್ರಿಲ್ 2021, 20:52 IST
ಗ್ರಾಹಕರಿಲ್ಲದೆ ಖಾಲಿಯಾಗಿದ್ದ ಗಾಂಧಿ ಬಜಾರ್‌ನ ಹೂವಿನ ಮಾರುಕಟ್ಟೆ -ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್
ಗ್ರಾಹಕರಿಲ್ಲದೆ ಖಾಲಿಯಾಗಿದ್ದ ಗಾಂಧಿ ಬಜಾರ್‌ನ ಹೂವಿನ ಮಾರುಕಟ್ಟೆ -ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್   

ಬೆಂಗಳೂರು: ಯುಗಾದಿ ಹಬ್ಬಕ್ಕೆ ಮಾರುಕಟ್ಟೆಗಳುಪ್ರತಿ ವರ್ಷದಂತೆ ವ್ಯಾಪಾರಕ್ಕೆ ಸಜ್ಜಾಗಿವೆ. ಆದರೆ, ಕೊರೊನಾ ಕಾರಣದಿಂದ ಮಾರುಕಟ್ಟೆಗೆ ಬರುವ ಗ್ರಾಹಕರು ಕಡಿಮೆಯಾಗಿದ್ದು, ವ್ಯಾಪಾರ ನೀರಸವಾಗಿದೆ ಎಂದು ವ್ಯಾಪಾರಿಗಳು ಆತಂಕಗೊಂಡಿದ್ದಾರೆ.

ಕಳೆದ ಯುಗಾದಿ ವೇಳೆ ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಹೇರಲಾಗಿತ್ತು. ಆದರೆ, ಹಬ್ಬಕ್ಕಾಗಿ ಮಾರುಕಟ್ಟೆಗಳಲ್ಲಿ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಕಾರಣದಿಂದ ಹೂವು, ಹಣ್ಣು, ತರಕಾರಿ ದರಗಳು ದಿಢೀರ್ ಏರಿಕೆ ಕಂಡಿದ್ದವು. ಆದರೆ, ಈ ಬಾರಿ ಮಾರುಕಟ್ಟೆಗಳು ಎಂದಿನಂತೆ ತೆರೆದಿದ್ದರೂ ಹಬ್ಬದ ಖರೀದಿಗೆಂದು ಬರುತ್ತಿರುವ ಗ್ರಾಹಕರು ವಿರಳವಾಗಿದ್ದರು.

ಮಲ್ಲೇಶ್ವರ, ಯಶವಂತಪುರ, ಬನಶಂಕರಿ, ಗಾಂಧಿಬಜಾರ್, ಇಂದಿರಾನಗರ, ವಿಜಯನಗರ, ಕೆ.ಆರ್.ಪುರ ಸೇರಿದಂತೆ ನಗರದಾದ್ಯಂತ ಹಬ್ಬಕ್ಕಾಗಿ ಕಿರು ಮಾರುಕಟ್ಟೆಗಳನ್ನು ತೆರೆಯಲಾಗಿದೆ. ಆದರೆ, ಮಳಿಗೆಗಳ ಬಳಿ ಬೆರಳೆಣಿಕೆಯಷ್ಟು ಗ್ರಾಹಕರು ಭಾನುವಾರ ಕಂಡು ಬಂದರು.

ADVERTISEMENT

‘ಕಳೆದ ಯುಗಾದಿ ವೇಳೆ ಕೊರೊನಾ ಆರಂಭಿಕ ಹಂತದಲ್ಲಿತ್ತು. ಆದರೂ ಮಾರುಕಟ್ಟೆಯಲ್ಲಿ ಜನಜಂಗುಳಿಯಾಗಿತ್ತು. ತಕ್ಕಮಟ್ಟಿಗೆ ವ್ಯಾಪಾರಿಗಳೂ ಲಾಭ ಕಂಡಿದ್ದರು. ಸಾಮಾನ್ಯವಾಗಿ ಯುಗಾದಿಗೆ ನಾಲ್ಕೈದು ದಿನಗಳ ಮುನ್ನವೇ ಖರೀದಿ ಗರಿಗೆದರುತ್ತಿತ್ತು. ಈಗ ಹಬ್ಬಕ್ಕೆ ಎರಡೇ ದಿನ ಉಳಿದಿದೆ. ಕಡಿಮೆ ಗ್ರಾಹಕರಿಂದ ಮಾರುಕಟ್ಟೆ ಎಂದಿನಂತೆಯೇ ಇದೆ’ ಎನ್ನುತ್ತಾರೆ ಕೆ.ಆರ್.ಮಾರುಕಟ್ಟೆಯ ಹೂವಿನ ವ್ಯಾಪಾರಿ ಮಂಜುನಾಥ್ ತಿಳಿಸಿದರು.

‘ಹಬ್ಬಕ್ಕಾಗಿ ಸಾಮಾನ್ಯವಾಗಿ ಹೂವಿನ ದರಗಳು ತುಸು ಏರಿಕೆಯಾಗಿವೆ. ಆದರೆ,ಕಳೆದ ಯುಗಾದಿಗಿಂತ ಹೆಚ್ಚಾಗಿಲ್ಲ. ಗ್ರಾಹಕರೇ ಇಲ್ಲದಾಗ ಬೆಲೆ ಏರಿದರೆ ಏನು ಪ್ರಯೋಜನ? ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುವ ನಿರೀಕ್ಷೆಯಲ್ಲಿದ್ದೇವೆ. ಇಲ್ಲದಿದ್ದರೆ, ಈ ಬಾರಿ ವ್ಯಾಪಾರಿಗಳು ಲಾಭದ ಯುಗಾದಿ ಕಾಣುವುದು ಅನುಮಾನ’ ಎಂದು ಬೇಸರ ವ್ಯಕ್ತಪಡಿಸಿದರು.

‘ಯಾವ ಯುಗಾದಿ ವೇಳೆಯೂ ಈ ರೀತಿಯ ಕಡಿಮೆ ಗ್ರಾಹಕರನ್ನು ಕಂಡಿರಲಿಲ್ಲ. ಹೂವಿನ ದರಗಳೆಲ್ಲ ಈ ವೇಳೆಗೆ ಗಗನಕ್ಕೇರಿರುತ್ತಿದ್ದವು. ಸದ್ಯ ಹಬ್ಬದಲ್ಲೂ ಚೆಂಡು ಹೂವಿನ ದರ ಪ್ರತಿ ಕೆ.ಜಿ.ಗೆ ಕೇವಲ ₹15 ಇದೆ. ಈ ಯುಗಾದಿಗೆ ಗ್ರಾಹಕರೇ ವ್ಯಾಪಾರಿಗಳ ಕೈಹಿಡಿಯಬೇಕು’ ಎಂದು ಕೆ.ಆರ್.ಮಾರುಕಟ್ಟೆಯ ದಿವಾಕರ್ ತಿಳಿಸಿದರು.

ತರಕಾರಿ ದರಗಳು ಸ್ಥಿರ: ಹಬ್ಬದ ಅಂಗವಾಗಿ ತರಕಾರಿ ದರಗಳು ಏರಿಕೆ ಕಂಡಿಲ್ಲ. ಬೆಳ್ಳುಳ್ಳಿ, ಬಟಾಣಿ, ಹಸಿ ಮೆಣಸಿನಕಾಯಿ ಹೊರತುಪಡಿಸಿ, ಉಳಿದೆಲ್ಲ ತರಕಾರಿಗಳ ದರ ಕಡಿಮೆ ಇದೆ. ಸೊಪ್ಪುಗಳ ಪೈಕಿ ಕೊತ್ತಂಬರಿ ದರ ತುಸು ಏರಿಕೆಯಾಗಿದೆ.

‘ಯುಗಾದಿ ಎರಡು ದಿನಗಳ ಹಬ್ಬ. ಮೊದಲ ದಿನ ಸಿಹಿ ಖಾದ್ಯಗಳನ್ನು ಸವಿಯುತ್ತಾರೆ. ಎರಡನೇ ದಿನ ಹೊಸ ತೊಡಕು ಅಂಗವಾಗಿ ಮಾಂಸದ ತರಹೇವಾರಿ ಭೋಜನಗಳೊಂದಿಗೆ ಹಬ್ಬ ಸಂಪನ್ನಗೊಳಿಸುತ್ತಾರೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಯುಗಾದಿಯ ಸಿಹಿಗಿಂತ ಹೊಸ ತೊಡಕು ವಿಜೃಂಭಣೆಯಿಂದ ಸಾಗುತ್ತದೆ. ಈ ವೇಳೆ ಮಾಂಸದ ಬೆಲೆ ಗಗನಕ್ಕೇರುತ್ತದೆ.ಹಾಗಾಗಿ, ತರಕಾರಿಗಳಿಗೆ ಅಷ್ಟೇನೂ ಬೇಡಿಕೆ ಇರುವುದಿಲ್ಲ. 15 ದಿನಗಳಿಂದ ಬೆಲೆಗಳು ಸ್ಥಿರವಾಗಿವೆ’ ಎಂದು ತರಕಾರಿ ವರ್ತಕ ಎಂ.ರವೀಶ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.