ADVERTISEMENT

ಯುಕೆಪಿ–3: ಪರಿಹಾರ ನೀಡಿ | ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಸಂಘಟನೆಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 16:15 IST
Last Updated 15 ಸೆಪ್ಟೆಂಬರ್ 2025, 16:15 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ–3) ಮೂರನೇ ಹಂತದ ಕಾಮಗಾರಿಗೆ ಭೂಸ್ವಾಧೀನ ಪಡಿಸಿಕೊಂಡ ಕೃಷಿ ಜಮೀನಿಗೆ ಕೂಡಲೇ ಪರಿಹಾರ ನೀಡಬೇಕು. ಇಲ್ಲದಿದ್ದರೆ ಉತ್ತರ ಕರ್ನಾಟಕದ 15 ಜಿಲ್ಲೆಗಳನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕು ಎಂದು ಉತ್ತರ ಕರ್ನಾಟಕದ ವಿವಿಧ ಸಂಘಟನೆಗಳು ಆಗ್ರಹಿಸಿವೆ.

ಉತ್ತರ ಕರ್ನಾಟಕ ಮುಳುಗಡೆ ಮತ್ತು ಪ್ರವಾಹ ಸಂತ್ರಸ್ತರ ಹಿತರಕ್ಷಣಾ ಸಮಿತಿ, ರೈತರ ಹಕ್ಕುಗಳ ಹೋರಾಟ ಸಮಿತಿ, ಉತ್ತರ ಕರ್ನಾಟಕ ಹೋರಾಟ ಸಮಿತಿಯ ಪದಾಧಿಕಾರಿಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು.

ADVERTISEMENT

ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾಗೇಶ ಗೋಲಶೆಟ್ಟಿ, ‘ಸಂತ್ರಸ್ತರಿಗೆ ಪರಿಹಾರ ನೀಡದೇ ಅನ್ಯಾಯ ಮಾಡಲಾಗಿದೆ. ಈಗ ಸಂತ್ರಸ್ತರಿಗೆ ನ್ಯಾಯವಾದ ಬೆಲೆ ನೀಡಿ ಕಾಮಗಾರಿ ಪ್ರಾರಂಭಿಸಬೇಕು, ಇಲ್ಲದಿದ್ದರೆ ಯೋಜನೆಯನ್ನೇ ಕೈಬಿಡಬೇಕು. ಇತ್ತೀಚೆಗೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಒಂದು ವಾರದಲ್ಲಿಯೇ ದರ ನಿಗದಿ ಮಾಡುತ್ತೇವೆ’ ಎಂದು ಭರವಸೆ ನೀಡಿದ್ದರು. ಇದುವರೆಗೂ ಅದು ಭರವಸೆ ಆಗಿಯೇ ಉಳಿದಿದೆ’ ಎಂದು ದೂರಿದರು.

‘ಒಣ ಬೇಸಾಯ ಮಾಡುವ ಪ್ರತಿ ಎಕರೆಗೆ ₹40 ಲಕ್ಷ ಹಾಗೂ ನೀರಾವರಿ ಜಮೀನಿಗೆ ₹ 50 ಲಕ್ಷ ಪರಿಹಾರ ನಿಗದಿಪಡಿಸಿ, ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಬೇಕು. ವಿಳಂಬವಾದರೆ ನಿಗದಿಪಡಿಸಿದ ದರಕ್ಕೆ ಪ್ರತಿವರ್ಷ ಶೇಕಡ 10ರಷ್ಟು ಹೆಚ್ಚುವರಿ ಮೊತ್ತ ನೀಡಬೇಕು’ ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕ ಸಂಘ–ಸಂಸ್ಥೆಗಳ ಮಹಾ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮೇಟಿ ಮಾತನಾಡಿ, ‘ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಕಡೆಗಣಿಸುತ್ತಿದೆ. ಆದ್ದರಿಂದ ಪ್ರತ್ಯೇಕ ರಾಜ್ಯವನ್ನು ಘೋಷಿಸುವಂತೆ ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಇದಕ್ಕೆ ಹಲವು ಸ್ವಾಮೀಜಿಗಳು ಸೇರಿದಂತೆ ಸಾಹಿತಿಗಳು ಬೆಂಬಲಿಸಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.