ADVERTISEMENT

ಕೌಶಲದ ಜತೆ ವೈಚಾರಿಕ ಪಠ್ಯವಿರಲಿ: ವಿ.ವಿ ಘಟಿಕೋತ್ಸವದಲ್ಲಿ ಸಬಿಹಾ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 0:30 IST
Last Updated 4 ಅಕ್ಟೋಬರ್ 2025, 0:30 IST
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳು ಸಂಭ್ರಮಿಸಿದರು  ಚಿತ್ರ ಕಿಶೋರ್ ಕುಮಾರ್ ಬೋಳಾರ್
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳು ಸಂಭ್ರಮಿಸಿದರು  ಚಿತ್ರ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ‘ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಉದ್ಯೋಗ, ಕೌಶಲ ಆಧಾರಿತ ಶಿಕ್ಷಣ ನೀಡುವ ಜತೆಗೆ ಹೆಣ್ಣು ಮಕ್ಕಳನ್ನು ವೈಚಾರಿಕವಾಗಿ ಬೆಳೆಸುವ ಪಠ್ಯ ಅಳವಡಿಸಬೇಕು’ ಎಂದು ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ ಸಲಹೆ ನೀಡಿದರು.

ಶುಕ್ರವಾರ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ 2 ಹಾಗೂ 3ನೇ ಘಟಿಕೋತ್ಸವದಲ್ಲಿ ಅವರು ಭಾಷಣ ಮಾಡಿದರು.

‘ಮಹಿಳಾ ವಿಶ್ವವಿದ್ಯಾಲಯಗಳ ಪಠ್ಯವು‌ ಮಹಿಳೆಯರ ಸಬಲೀಕರಣಕ್ಕೆ,ಅವರನ್ನು ವೈಚಾರಿಕರನ್ನಾಗಿ
ಮಾಡುವುದಕ್ಕೆ ಪೂರಕವಾಗಿ ಇದೆಯೇ? ಮಹಿಳಾ ಲೋಕದೃಷ್ಟಿ, ಅವರ ಪರಂಪರಾಗತ ಜ್ಞಾನ ಗುರುತಿಸಿ, ಶೈಕ್ಷಣಿಕ ವಲಯದಲ್ಲಿ ಅವುಗಳಿಗೆ ಮಾನ್ಯತೆ ದೊರೆಯುವಂಥ ಕೆಲಸದಲ್ಲಿ ತೊಡಗಿದೆಯೇ?, ಇತರೆ
ವಿಶ್ವವಿದ್ಯಾಲಯಗಳ ಪಠ್ಯದ ಮಾದರಿಯನ್ನೇ ಅವು ಅನುಸರಿಸುತ್ತಿ ವೆಯೇ ಎನ್ನುವ ಬಗ್ಗೆ ಮುಕ್ತ ಚರ್ಚೆ ಆಗಬೇಕಿದೆ’ ಎಂದು ತಿಳಿಸಿದರು.

ADVERTISEMENT

‘ಸಾವಿತ್ರಿ ಬಾಯಿ ಫುಲೆ ಸೇರಿದಂತೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ ನಮ್ಮ ಪೂರ್ವಜರ ಪ್ರಯತ್ನ, ಅಭಿವೃದ್ಧಿಯ ಪರಿಕಲ್ಪನೆಯ ಕನಸು ಇಂದು ನಮಗೂ ಹೊಸ ಸಾಮಾಜಿಕ ಕನಸು ಕಟ್ಟಲು ಪ್ರೇರಣೆಯಾಗಬೇಕಿದೆ. ಈಗಿನ ಕಾಲಘಟ್ಟಕ್ಕೆ ತಕ್ಕಂತೆ ದೇಶದಾದ್ಯಂತ ಸರ್ಕಾರಿ ಹಾಗೂ ಖಾಸಗಿ ಮಹಿಳಾ
ವಿಶ್ವವಿದ್ಯಾನಿಲಯಗಳು ಆರಂಭವಾಗಿವೆ. ಆದರೆ, ಹೆಣ್ಣು ಮಕ್ಕಳ ಯೋಚನೆಯಲ್ಲಿನ ಸ್ಪಷ್ಟತೆ, ಅಭಿವ್ಯಕ್ತಿಯಲ್ಲಿನ ತಾಜಾತನ, ನಿರ್ಭಿಡೆಯ ನಡಿಗೆ ವಾತಾವರಣ ಬಲಪಡಿಸುವುದು ಶಿಕ್ಷಣದೊಂದಿಗೆ ಹೆಚ್ಚೆಚ್ಚು ಆಗಬೇಕಿದೆ‌’ ಎಂದು ನುಡಿದರು. 

ಪದವಿ ಪ್ರದಾನ ಮಾಡಿದ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಮಾತನಾಡಿ, ‘ಹೆಣ್ಣು ಮಕ್ಕಳಿಗೆ ಶಿಕ್ಷಣದ ಜತೆಗೆ ಉದ್ಯೋಗ ಪಡೆಯುವ ಅವಕಾಶಗಳು ಈಗ ಮೊದಲಿಗಿಂತಲೂ ಹೆಚ್ಚಿವೆ. ಸರ್ಕಾರದಿಂದ ಸೌಲಭ್ಯಗಳು ಸಿಗುತ್ತಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕುಲಪತಿ ಟಿ.ಎಂ.ಮಂಜುನಾಥ್‌ ಮಾತನಾಡಿ, ‘ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಜತೆಗೆ ಉದ್ಯೋಗ ಸೃಷ್ಟಿಸುವ ‌ ಪುರಾತತ್ವಶಾಸ್ತ್ರ, ಪ್ರವಾಸೋದ್ಯಮ ನಿರ್ವಹಣೆ ಕೋರ್ಸ್‌ ಆರಂಭಿಸಲಾಗುತ್ತಿದೆ’ ಎಂದು ಹೇಳಿದರು.

ಕುಲಸಚಿವರಾದ ಸೀಮಾ ನಾಯಕ್‌, ಎಸ್‌.ಸತೀಶ್‌, ಹಣಕಾಸು ಅಧಿಕಾರಿ ಎಂ.ಎಸ್‌.ಚೇತನ್‌ ಕುಮಾರ್‌, ವಿವಿಧ ವಿಭಾಗಗಳ ಡೀನ್‌ಗಳು, ಸಿಂಡಿಕೇಟ್‌ ಸದಸ್ಯರು ಹಾಜರಿದ್ದರು.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಲೇಖಕಿ ದು.ಸರಸ್ವತಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ನಟಿ ಭಾರತಿ ವಿಷ್ಣುವರ್ಧನ್ ಹೋಮಿಯೋಪಥಿ ವೈದ್ಯ ಡಾ.ಬಿ.ಟಿ.ರುದ್ರೇಶ್ ಶಿಕ್ಷಣ ತಜ್ಞೆ ಎಚ್.ಎನ್.ಉಷಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು ಪ್ರಜಾವಾಣಿ ಚಿತ್ರ

2ನೇ ಘಟಿಕೋತ್ಸವ(2023–24) ಪದವಿ ಪಡೆದವರು 1,827 ರ‍್ಯಾಂಕ್ ವಿಜೇತರು 51 ಸ್ವರ್ಣ ಪದಕ ಪಡೆದವರು 24 3ನೇ ಘಟಿಕೋತ್ಸವ (2024–25) ಪದವಿ ಪಡೆದವರು 1,746 ರ‍್ಯಾಂಕ್ ಪಡೆದವರು 56 ಸ್ವರ್ಣ ಪದಕ ಪಡೆದವರು 28

ಮಹಾರಾಣಿ ಕಾಲೇಜು ಕ್ಲಸ್ಟರ್ ವಿಶ್ವವಿದ್ಯಾಲಯ ಆದ ಮೇಲೆ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಾಗಿದೆ. ಹಲವು ಸೌಲಭ್ಯಗಳೊಂದಿಗೆ ವಿದ್ಯಾರ್ಥಿನಿಯರ ಪ್ರಮಾಣ ಹೆಚ್ಚಿಸಲಾಗುತ್ತಿದೆ
. ಡಾ.ಎಂ.ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.