ADVERTISEMENT

ವಿ.ವಿ ವಿದ್ಯಾರ್ಥಿಗಳ ಪ್ರತಿಭಟನೆ

ನೇಮಕಾತಿ ನಿಯಮ ಬದಲಾವಣೆಗೆ ಮುಂದಾಗಿದ್ದ ಸರ್ಕಾರದ ನಡೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 19:59 IST
Last Updated 20 ನವೆಂಬರ್ 2018, 19:59 IST
ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿ.ವಿ ಕೇಂದ್ರ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು
ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿ.ವಿ ಕೇಂದ್ರ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ನಿಯಮ ಬದಲಾವಣೆ ಮಾಡಲು ಮುಂದಾಗಿದ್ದ ರಾಜ್ಯ ಸರ್ಕಾರದ ನಡೆ ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ವಿ.ವಿ.ಕೇಂದ್ರ ಕಚೇರಿ ಎದುರು
ಪ್ರತಿಭಟನೆ ನಡೆಯಿತು.

ಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ನೀತಿಯಿಂದ ದಲಿತರು ಹಾಗೂ ಹಿಂದುಳಿದ ವರ್ಗದವರು ಮತ್ತಷ್ಟು ಅವಕಾಶ ವಂಚಿತರಾಗಲಿದ್ದಾರೆ. ಬೇರೊಂದು ವರ್ಗದ ಜನತೆಯನ್ನು ಓಲೈಸಲು ಮುಂದಾಗಿರುವ ಸರ್ಕಾರ ಸಂವಿಧಾನ ವಿರೋಧಿ ಕೃತ್ಯಕ್ಕೆ ಕೈಹಾಕಿದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯದ ಅಭ್ಯುದಯಕ್ಕಾಗಿಯೇ ಮೀಸಲಾತಿ ಜಾರಿಗೆ ತರಲಾಗಿದೆ ಎಂಬ ಕನಿಷ್ಠ ಸತ್ಯವನ್ನು ಸರ್ಕಾರ ಮರೆತಿರುವುದು ದೌರ್ಭಾಗ್ಯ ಎಂದು ವಿದ್ಯಾರ್ಥಿಗಳು ಕಿಡಿಕಾರಿದರು.

ಆಡಳಿತಾತ್ಮಕ ಸೇವೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಭ್ಯರ್ಥಿಗಳು ಮೆರಿಟ್ ಆಧಾರದಲ್ಲಿ ಉದ್ಯೋಗಾವಕಾಶ ಪಡೆಯಬಾರದೆಂಬ ಉದ್ದೇಶದಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇಂತಹ ಕಾನೂನುಗಳನ್ನು ಜಾರಿಗೊಳಿಸಲು ಹೊರಟಿವೆ. ಪ್ರಜ್ಞಾವಂತ ಸಮಾಜ ಈ ಸಂವಿಧಾನ ಬಾಹಿರ ನೀತಿಯನ್ನು ಖಂಡಿಸಬೇಕಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕ ಪ್ರೊ.ಮೈಲಾರಪ್ಪ ಹೇಳಿದರು.

ADVERTISEMENT

ಸಾಮಾಜಿಕ ನ್ಯಾಯದಡಿ ಶೋಷಿತ ಸಮುದಾಯಗಳ ಏಳಿಗೆಗೆ ಸರ್ಕಾರಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು. ಸಂವಿಧಾನದ ಮೂಲ ಆಶಯಗಳನ್ನು ಈಡೇರಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಬಿ.ಕೆ.ರವಿ ಒತ್ತಾಯಿಸಿದರು.

ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.