ADVERTISEMENT

ಅರ್ಬನ್‌ ಬ್ಯಾಂಕ್‌ಗಳು ನಂಬಿಕೆ ಉಳಿಸಿಕೊಳ್ಳಲಿ: ಸಚಿವ ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 16:16 IST
Last Updated 23 ಜನವರಿ 2026, 16:16 IST
ನಗರದ ಶ್ರೀ ತ್ಯಾಗರಾಜ ಕೋ–ಆಪರೇಟಿವ್ ಬ್ಯಾಂಕ್ ತ್ಯಾಗರಾಜರ ಆರಾಧನಾ ಮಹೋತ್ಸವ ಅಂಗವಾಗಿ ಹೊರ ತಂದಿರುವ ಮೈಸ್ಟಾಂಪ್‌ ಮತ್ತು ವಿಶೇಷ ಪೋಸ್ಟಲ್ ಕವರ್‌ ಅನ್ನು ಎಚ್‌.ಕೆ.ಪಾಟೀಲ ಬಿಡುಗಡೆ ಬಿಡುಗಡೆ ಮಾಡಿದರು. ಅಶ್ವತ್ಥನಾರಾಯಣ, ವಿ. ತಾರಾ, ಗಜೇಂದ್ರಕುಮಾರ್ ಮೀನಾ, ಎಂ.ಆರ್. ವೆಂಕಟೇಶ್ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ
ನಗರದ ಶ್ರೀ ತ್ಯಾಗರಾಜ ಕೋ–ಆಪರೇಟಿವ್ ಬ್ಯಾಂಕ್ ತ್ಯಾಗರಾಜರ ಆರಾಧನಾ ಮಹೋತ್ಸವ ಅಂಗವಾಗಿ ಹೊರ ತಂದಿರುವ ಮೈಸ್ಟಾಂಪ್‌ ಮತ್ತು ವಿಶೇಷ ಪೋಸ್ಟಲ್ ಕವರ್‌ ಅನ್ನು ಎಚ್‌.ಕೆ.ಪಾಟೀಲ ಬಿಡುಗಡೆ ಬಿಡುಗಡೆ ಮಾಡಿದರು. ಅಶ್ವತ್ಥನಾರಾಯಣ, ವಿ. ತಾರಾ, ಗಜೇಂದ್ರಕುಮಾರ್ ಮೀನಾ, ಎಂ.ಆರ್. ವೆಂಕಟೇಶ್ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮೂರು ಅರ್ಬನ್ ಬ್ಯಾಂಕ್‌ಗಳು ಆರ್ಥಿಕವಾಗಿ ತೊಂದರೆಗೆ ಸಿಲುಕಿದರೂ ನಂಬಿಕೆ ಮೇಲೆಯೇ ಇತರ ಸಹಕಾರ ಬ್ಯಾಂಕ್‌ಗಳ ವಹಿವಾಟು ನಡೆಯುತ್ತಿದೆ. ಅದನ್ನು ಉಳಿಸಿಕೊಳ್ಳಬೇಕು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಸಲಹೆ ನೀಡಿದರು.

ಶ್ರೀ ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ ಗುರುವಾರ ಆಯೋಜಿಸಿದ್ದ ತ್ಯಾಗರಾಜರ ಆರಾಧನಾ ಮಹೋತ್ಸವ‌ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶದಲ್ಲಿ 1451 ಅರ್ಬನ್‌ ಬ್ಯಾಂಕ್‌ಗಳಿದ್ದು, ಇವುಗಳ ದುಡಿಯುವ ಬಂಡವಾಳದ ಪ್ರಮಾಣವೇ ₹6.50 ಲಕ್ಷ ಕೋಟಿಯಷ್ಟಿದೆ. ಇದರಲ್ಲಿ ಠೇವಣಿ ಪ್ರಮಾಣ ₹ 5.33 ಲಕ್ಷ ಕೋಟಿ. ಕರ್ನಾಟಕದ 249 ಅರ್ಬನ್ ಬ್ಯಾಂಕ್‌ಗಳಲ್ಲಿ 24 ಲಕ್ಷ ಸದಸ್ಯರಿದ್ದು, ದುಡಿಯುವ ಬಂಡವಾಳ ಪ್ರಮಾಣ ₹58 ಸಾವಿರ ಕೋಟಿ. ಈ‌ ಬ್ಯಾಂಕ್‌ಗಳು ₹500 ಕೋಟಿ ನಿವ್ವಳ ಲಾಭ ಪಡೆಯುತ್ತಿವೆ. ಎನ್‌ಪಿಎ ಪ್ರಮಾಣ ಶೇ 3ಕ್ಕಿಂತ ಕಡಿಮೆ ಇರುವುದು ಗಮನಾರ್ಹ’ ಎಂದರು.

ADVERTISEMENT

‘ಸರ್ಕಾರದ ನೆರವು ಇಲ್ಲದೇ ಸಹಕಾರ ಬ್ಯಾಂಕ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ತ್ಯಾಗರಾಜ ಬ್ಯಾಂಕ್‌ನವರು ಉದ್ಯೋಗ ಸೃಷ್ಟಿ ಮಾಡುವವರಿಗೆ ಸಾಲ ನೀಡುವ ಪದ್ದತಿಯನ್ನು ರೂಢಿಸಿಕೊಳ್ಳಬೇಕು. ಇದು ಮುಂದಿನ ದಿನಗಳಲ್ಲಿ ಬ್ಯಾಂಕಿನ ಪ್ರಗತಿಗೂ ಸಹಕಾರಿಯಾಗಲಿದೆ‘ ಎಂದು ಹೇಳಿದರು.

ವಿಧಾನ ಪರಿಷತ್‌ನ ಮಾಜಿ ಸದಸ್ಯ ಅಶ್ವತ್ಥನಾರಾಯಣ‌ ಮಾತನಾಡಿ, ‘ಮೂರು ದಶಕದ ಹಿಂದೆ ಬಿಎಚ್ಇಎಲ್‌ ಸಹಿತ ಹಲವು ಸಂಸ್ಥೆಗಳ ನೌಕರರಿಗೆ ನಿವೇಶನ ಸಾಲವನ್ನು ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್‌ ನೀಡಿತು. ಇದರಿಂದ ಹಲವರು ಸೂರು ಮಾಡಿಕೊಂಡು ಅವರ ಆಸ್ತಿ ಮೌಲ್ಯ ಬೆಳೆದಿರುವುದು ಸಂತಸದ ಸಂಗತಿ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ವ್ಯವಸ್ಥಾಪಕ ನಿರ್ದೇಶಕ ನವೀನ್‌, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್‌ಗಳ ಮಹಾಮಂಡಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪುಂಡಲೀಕ ಎನ್‌. ಕೇರೂರೆ, ತ್ಯಾಗರಾಜ  ಬ್ಯಾಂಕ್‌ ಅಧ್ಯಕ್ಷ ಎಂ.ಆರ್.ವೆಂಕಟೇಶ್‌, ಉಪಾಧ್ಯಕ್ಷ ಎಂ.ಎನ್‌. ಕಂಬೇಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌. ಶ್ರೀರಾಮ್‌, ನಿರ್ದೇಶಕರು ಹಾಜರಿದ್ದರು.

ಪ್ರಶಸ್ತಿ ಪ್ರದಾನ ಅತ್ಯುತ್ತಮ ಪಟ್ಟಣ ಸಹಕಾರ ಬ್ಯಾಂಕ್ ಪ್ರಶಸ್ತಿಯನ್ನು ವಿಜಯನಗರದ ಜನಸೇವಾ ಕೋ ಆಪರೇಟಿವ್‌ ಬ್ಯಾಂಕ್‌ಗೆ ಅತ್ಯುತ್ತಮ ನೌಕರ ಪ್ರಶಸ್ತಿಯನ್ನು ತುಮಕೂರು ವೀರಶೈವ ಸಹಕಾರ ಬ್ಯಾಂಕ್‌ನ ಆಶಾ ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ನ ದೊಡ್ಡೇಗೌಡ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.